ಒಳ ರಸ್ತೆಯ ವಿವಿಧೆಡೆ ತ್ಯಾಜ್ಯ ರಾಶಿ: ದುರ್ವಾಸನೆಯಿಂದ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಹೆದ್ದಾರಿಯಲ್ಲಿ ತ್ಯಾಜ್ಯ ತೆರವುಗೊಳಿಸಿ ಸಿಸಿ ಕ್ಯಾಮರ ಇರಿಸಿದ ಬಳಿಕ ಈಗ ಒಳ ರಸ್ತೆಗಳಲ್ಲಿ ತ್ಯಾಜ್ಯ ಉಪೇಕ್ಷಿ ಸುವುದು ವ್ಯಾಪಕಗೊಂಡಿದ್ದು, ದುರ್ವಾಸನೆಯಿಂದ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿದೆ. ನಯಬಜಾರ್ ಒಳ ರಸ್ತೆಯ ಕುದುಕೋಟಿ, ಮಣ್ಣಂಗುಳಿ ಮೈದಾನ ರಸ್ತೆ, ಪತ್ವಾಡಿ ಸಹಿತ ವಿವಿಧ ಪ್ರದೇಶಗಳ ಒಳರಸ್ತೆಗಳಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಉಪೇಕ್ಷಿಸ ಲಾಗಿದ್ದು, ಮಳೆಗೆ ಕೊಳೆತು ದುರ್ವಾಸನೆ ಬೀರುತ್ತಿದೆ. ಮಾರಕ ರೋಗಕ್ಕೆ ಕಾರಣವಾಗುತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಈ ಹಿಂದೆ ಉಪ್ಪಳದಿಂದ ಬಂದ್ಯೋಡು ತನಕ ಹೆದ್ದಾರಿ ಬದಿಯಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ರಾಶಿ ಜನರ ನೆಮ್ಮದಿಯನ್ನು ಕೆಡಿಸಿದ್ದು, ಬಳಿಕ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಂಗಲ್ಪಾಡಿ ಪಂಚಾಯತ್ ವತಿಯಿಂದ ಕ್ಲೀನ್ ಕೇರಳ ಕಂಪೆನಿಯ ನೇತೃತ್ವದಲ್ಲಿ ತ್ಯಾಜ್ಯಗಳನ್ನು ತೆರವುಗೊಳಿಸಿ ಅಲ್ಲಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಲಾಗಿತ್ತು. ಆದರೆ ಇದೀಗ ಹೆದ್ದಾರಿಯಲ್ಲಿ ಉಪೇಕ್ಷಿಸುವುದನ್ನು ನಿಲ್ಲಿಸಿ ಒಳರಸ್ತೆ ಯಲ್ಲಿ ಆರಂಭಿಸಿರುವುದು ಸ್ಥಳೀಯರಿಗೆ ಸಮಸ್ಯೆ ಯಾಗಿದೆ. ವಿವಿಧ ಸಮಾರಂಭ ಹಾಗೂ ಫ್ಲಾಟ್‌ಗಳಿಂದ ಹೆಚ್ಚಾಗಿ ತ್ಯಾಜ್ಯ ತಂದು ಇಲ್ಲಿ ಉಪೇಕ್ಷಿಸಲಾಗುವುದಾಗಿ ಹೇಳಲಾಗುತ್ತಿದೆ. ಪಂಚಾಯತ್ ಅಧಿಕಾರಿಗಳÀÄ ಒಳ ರಸ್ತೆಯಲ್ಲೂ ಸಿಸಿ ಕ್ಯಾಮರ ಸ್ಥಾಪಿಸಿ ಉಪೇಕ್ಷಿಸುವುದನ್ನು ಪತ್ತೆ ಹಚ್ಚಿ ಅವರಿಂದ ದಂಡ ವಸೂಲಿ ಮಾಡುವುದರ ಮೂಲಕ ತ್ಯಾಜ್ಯ ಉಪೇಕ್ಷಿಸುವುದನ್ನು ತಡೆಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You cannot copy contents of this page