ಓಟುಗಾಗಿ ಸಂಚಾರ ಆರಂಭ: ಮತದಾರರ ಯಾದಿಯಲ್ಲಿ ಹೆಸರು ಸೇರಿಸಲು ಜಿಲ್ಲಾಧಿಕಾರಿ ಕರೆ
ಕಾಸರಗೋಡು: ಜಿಲ್ಲಾ ಚುನಾವಣೆ ವಿಭಾಗದ ಹಾಗೂ ಸ್ವೀಪ್‌ನ ಜಂಟಿ ಆಶ್ರಯದಲ್ಲಿ ಜನರಲ್ಲಿ ಮತದಾನ ಮಾಡಬೇಕಾದ ಪ್ರಾಮುಖ್ಯತೆಯ ಬಗ್ಗೆ ತಿಳುವಳಿಕೆ ಮೂಡಿಸಲು, ಮತದಾನ ಯಂತ್ರಗಳನ್ನು ತಿಳಿದುಕೊಳ್ಳಲು ಜಿಲ್ಲೆಯ ಕಾಲೇಜು ಕ್ಯಾಂಪಸ್‌ಗಳ ಮೂಲಕ, ಕಾಲನಿಗಳ ಮೂಲಕ ಓಟುಗಾಗಿ ಪ್ರಯಾಣ ಆರಂಭಿಸಿದೆ. ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಓಟುಗಾಗಿ ಪ್ರಯಾಣಕ್ಕೆ ಚಾಲನೆ ನೀಡಿದರು. ಮತದಾರರ ಯಾದಿಯಲ್ಲಿ ಹೆಸರು ಸೇರಿಸಲಿರುವವರು ಕಡ್ಡಾಯವಾಗಿ ಹೆಸರು ಸೇರಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು. ಸ್ವೀಪ್ ಜಿಲ್ಲಾ ನೋಡೆಲ್ ಅಧಿಕಾರಿ ಟಿ.ಟಿ. ಸುರೇಂದ್ರನ್ ಅಧ್ಯಕ್ಷತೆ ವಹಿಸಿದರು. ಕೆ. ಅಜೇಶ್, ಶ್ರೀಜಿತ್, ಸಜಿ ಎಂಬಿವರು ಮಾತನಾಡಿದರು. ಪ್ರಾಂಶುಪಾಲ ಕೆ. ಮುಹಮ್ಮದಲಿ ಸ್ವಾಗತಿಸಿ, ಸುಜಿತ್ ಪಾಲೇರಿ ವಂದಿಸಿದರು. ಬಳಿಕ ಕುಂಬಳೆ ಪೇಟೆಯಲ್ಲಿ ಬೀದಿ ಚಿತ್ರರಚನೆ, ಐಎಚ್‌ಆರ್‌ಡಿ ಕಾಲೇಜು ವಿದ್ಯಾರ್ಥಿಗಳ ಫ್ಲಾಶ್‌ಮೋಬ್ ನಡೆಸಲಾಯಿತು. ಬಳಿಕ ವಿವಿಧ ಕಾಲೇಜುಗಳಿಗೆ ಓಟುಗಾಡಿ ಸಂಚರಿಸಿದೆ. ಬದಿಯಡ್ಕ ಕೊರಗ ಕಾಲನಿಗೂ ಗಾಡಿ ತಲುಪಿದೆ. ಈ ತಿಂಗಳ ೨೫ರವರೆಗೆ ಈ ಗಾಡಿ ವಿವಿಧ ಕಡೆಗಳಿಗೆ ತೆರಳಲಿದೆ.