ಓಣಂ ಕಿಟ್ ಹಳದಿ ರೇಶನ್ ಕಾರ್ಡ್‌ನವರಿಗೆ ಮಾತ್ರ
ತಿರುವನಂತಪುರ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿರುವ ರಾಜ್ಯ ಸರಕಾರ ಈ ಬಾರಿಯ ಓಣಂ ಕಿಟ್ ವಿತರಣೆಯನ್ನು ಹಳದಿ ರೇಶನ್ ಕಾರ್ಡ್‌ಗಳಿಗೆ ಮಾತ್ರ ಸೀಮಿತಗೊಳಿಸಿದೆ. ಇದರಂತೆ ರಾಜ್ಯದಲ್ಲಿ ಎ.ಐ.ವೈ (ಅಂತ್ಯೋದಯ ಅನ್ನ ಯೋಜನಾ) ವಿಭಾಗಕ್ಕೆ ಸೇರಿದ ೫,೮೭,೬೯೧ ಕಾರ್ಡ್‌ದಾರರಿಗೆ ಮಾತ್ರ ಈ ಬಾರಿ ರೇಶನ್ ಓಣಂ ಕಿಟ್ ಲಭಿಸಲಿದೆ.
ಇದರ ಹೊರತಾಗಿ ಕಲ್ಯಾಣ ಸಂಸ್ಥೆಗಳು ನಡೆಸುತ್ತಿರುವ ವೃದ್ಧಸದನ, ಅನಾಥಾಲಯಗಳಲ್ಲಿ ಕಳೆಯುತ್ತಿರುವ ೨೦,೦೦೦ ಮಂದಿಗೂ ಓಣಂ ಕಿಟ್ ಲಭಿಸಲಿದೆ. ಪ್ರತೀ ಓಣಂ ಕಿಟ್‌ನಲ್ಲಿ ೧೩ ವಿವಿಧ ಸಾಮಗ್ರಿಗಳು ಒಳಗೊಳ್ಳಲಿದೆ. ಕಳೆದ ವರ್ಷ ವಿವಿಧ ೧೪ ಸಾಮಗ್ರಿಗಳು ಕಿಟ್‌ನಲ್ಲಿ ಒಳಗೊಂಡಿತ್ತು. ಮಾತ್ರವಲ್ಲ ಕಳೆದ ವರ್ಷ ಎಲ್ಲಾ ವಿಭಾಗದ ರೇಶನ್ ಕಾರ್ಡ್‌ಗಳಿಗೆ ಸೇರಿದ ಒಟ್ಟು ೮೭ ಲಕ್ಷ ಮಂದಿಗೆ ಓಣಂ ಕಿಟ್ ವಿತರಿಸಲಾಗಿತ್ತು. ನಮಗೆ ಓಣಂ ಕಿಟ್‌ನ ಅಗತ್ಯವಿಲ್ಲವೆಂದು ಲಿಖಿತವಾಗಿ ಬರೆದು ಕೊಟ್ಟವರನ್ನು ಮಾತ್ರವೇ ಕಳೆದ ವರ್ಷ ಓಣಂ ಕಿಟ್‌ನಿಂದ ಹೊರತುಪಡಿಸಲಾಗಿತ್ತು.
ಈ ವರ್ಷ ರೇಶನ್ ಅಂಗಡಿಗಳಲ್ಲಿ ಹಳದಿ ಕಾರ್ಡ್‌ದಾರರಿಗೆ ಮಾತ್ರವಾಗಿ ವಿತರಿಸಲಾಗುವ ಓಣಂ ಕಿಟ್‌ನಲ್ಲಿ ಚಹಾ ಹುಡಿ, ಬೇಳೆ, ಸೇಮಿಗೆ ಪಾಯಸ ಮಿಕ್ಸ್, ತುಪ್ಪ, ಗೇರುಬೀಜ, ತೆಂಗಿನೆಣ್ಣೆ, ಸಾಂಬಾರು ಹುಡಿ, ಮೆಣಸಿನ ಹುಡಿ, ಹರಸಿನ ಹುಡಿ, ಕೊತ್ತಂಬರಿ ಹುಡಿ, ಪಚ್ಚೆಸ್ರು, ತೊಗರಿ ಬೇಳೆ ಮತ್ತು ಹುಡಿ ಉಪ್ಪು ಒಳಗೊಳ್ಳಲಿದೆ ಎಂದು ಸರಕಾರ ತಿಳಿಸಿದೆ.