ಔಷಧಿ ತರಲೆಂದು ಹೋಗಿ ನಾಪತ್ತೆಯಾಗಿದ್ದ ಗೃಹಿಣಿಯ ಮೃತದೇಹ ಹೊಳೆಯಲ್ಲಿ ಪತ್ತೆ
ಬದಿಯಡ್ಕ: ಔಷಧಿ ಖರೀದಿಸ ಲೆಂದು ತಿಳಿಸಿ ಮನೆಯಿಂದ ಹೋದ ಬಳಿಕ ನಾಪತ್ತೆಯಾಗಿದ್ದ ಗೃಹಿಣಿಯ ಮೃತದೇಹ ಕುಂಬಳೆ ಹೊಳೆಯಲ್ಲಿ ಪತ್ತೆಯಾಗಿದೆ.
ನಾರಂಪಾಡಿ ನಿವಾಸಿ ದಿ| ನಾರಾಯಣ ಎಂಬವರ ಪತ್ನಿ ಲೀಲಾವತಿ (60) ಎಂಬವರ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ. ನಿನ್ನೆ ಸಂಜೆ ಸಂಬಂಧಿಕರು ಹಾಗೂ ನಾಗರಿಕರು ಮೃತದೇಹ ಕುಂಬಳೆ ಹೊಳೆಯ ಸೇತುವೆ ಬಳಿ ಶೋಧ ನಡೆಸುತ್ತಿದ್ದಾಗ ಮೃತದೇಹ ಪತ್ತೆಯಾಗಿದೆ. ಅವರು ನೀಡಿದ ಮಾಹಿತಿಯಂತೆ ಅಗ್ನಿಶಾಮಕದಳ ತಲುಪಿ ಮೃತದೇಹವನ್ನು ಹೊಳೆಯಿಂದ ಮೇಲಕ್ಕೆತ್ತಿದೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು.
ಪುತ್ರ ಪ್ರಮೋದ್ ಜತೆ ವಾಸಿಸುತ್ತಿದ್ದ ಲೀಲಾವತಿಯವರು ಸೋಮವಾರ ಬೆಳಿಗ್ಗೆ ಔಷಧಿ ತರಲೆಂದು ತಿಳಿಸಿ ಬದಿಯಡ್ಕಕ್ಕೆ ಹೋಗಿದ್ದರು. ಆದರೆ ಅಂದು ಸಂಜೆಯಾದರೂ ಮರಳಿ ಬಂದಿರಲಿಲ್ಲ. ಇದರಿಂದ ಪುತ್ರ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಲೀಲಾವತಿ ಆಟೋ ರಿಕ್ಷಾದಲ್ಲಿ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಸಮೀಪಕ್ಕೆ ತೆರಳಿರುವುದಾಗಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರಿಗಾಗಿ ಶೋಧ ನಡೆಸುತ್ತಿದ್ದಂತೆ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ.
ಮೃತರು ಮಕ್ಕಳಾದ ಪ್ರಮೋದ್, ವಿನೋದ್, ಪ್ರಸಾದ್, ಸೊಸೆಯಂದಿರಾದ ಶಶಿಕಲಾ, ನವ್ಯಾ, ಸಹೋದರಿಯರಾದ ಯಶೋದ, ರಾಜೇಶ್ವರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.