ಕಟ್ಟಿಗೆಯಿಂದ ತಲೆಗೆ ಹೊಡೆದು ಪತ್ನಿಯನ್ನು ಕೊಲೆಗೈದ ಪ್ರಕರಣ: ಪತಿಗೆ ಹತ್ತು ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕಟ್ಟಿಗೆಯಿಂದ ತಲೆಗೆ ಹೊಡೆದು ಪತ್ನಿಯನ್ನು ಕೊಲೆಗೈದ ಪ್ರಕರಣದ ಆರೋಪಿ ಯಾದ ಪತಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ  ಸೆಶನ್ಸ್ ನ್ಯಾಯಾ ಲಯ (ತೃತೀಯ) ಹತ್ತು ವರ್ಷ ಕಠಿಣ ಸಜೆ ಹಾಗೂ ಮೂರು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಮುನ್ನಾಡು ಕುರುತ್ತಿಕುಂಡು ಕಾಲನಿಯ ಸುಮಿತ (23) ಎಂಬಾಕೆಯನ್ನು ಕೊಲೆಗೈದ ಪ್ರಕರಣದ ಆರೋಪಿಯಾಗಿರುವ ಆಕೆಯ ಪತಿ ಅರುಣ್ ಕುಮಾರ್ (28) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.

ವಿವಿಧ ಸೆಕ್ಷನ್‌ಗಳಲ್ಲಾಗಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದೂ, ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

2021 ಫೆಬ್ರವರಿ 20ರಂದು ರಾತ್ರಿ ಸುಮಿತಳನ್ನು ಆಕೆಯ ಮನೆಯಲ್ಲೇ ಕೊಲೆಗೈಯ್ಯಲಾಗಿತ್ತು. ಅದರ ಹಿಂದಿನ ದಿನದಂದು ಅರುಣ್ ಕುಮಾರ್ ಮದ್ಯದಮಲಿನಲ್ಲಿ ಮನೆಗೆ ಬಂದಿದ್ದನು. ಬಳಿಕ ರಾತ್ರಿ ಪತ್ನಿಯೊಂದಿಗೆ ವಾಗ್ವಾದ ಉಂಟಾಗಿತ್ತೆಂದೂ ಆ ದ್ವೇಷದಿಂದ ಆತ ಕಟ್ಟಿಗೆಯಿಂದ ಸುಮಿತಳ ತಲೆಗೆ ಹೊಡೆದು ಕೊಲೆಗೈದಿರುವುದಾಗಿ ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಬಗ್ಗೆ ಅಂದು ಬೇಡಗಂ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್  ಆಗಿದ್ದ ಟಿ. ದಾಮೋದರನ್ ಈ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ನಂತರ ಎಸ್‌ಐ ಕೆ. ಮುರಳೀಧರನ್ ನ್ಯಾಯಾಲಯಕ್ಕೆ ಈ ಕೊಲೆ ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಪಿ. ಸತೀಶನ್ ಮತ್ತು ಅಂಬಿಳಿ ನ್ಯಾಯಾಲಯದಲ್ಲಿ ವಾದಿಸಿದ್ದರು.

You cannot copy contents of this page