ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ ವೇಳೆ ಡಾಮರು ಬ್ಯಾರೆಲ್‌ನೊಳಗೆ ಸಿಲುಕಿದ ಬಾಲಕಿ: ಗಂಟೆಗಳ ಪ್ರಯತ್ನದಿಂದ ರಕ್ಷಣೆ

ಕಾಸರಗೋಡು: ಕಣ್ಣಾಮುಚ್ಚಾಲೆ ಆಟವಾಡುತ್ತಿ ದ್ದಾಗ ಡಾಮರು ತುಂಬಿಸಿಟ್ಟ ಬ್ಯಾರೆಲ್‌ನೊಳಗೆ ಇಳಿದ ನಾಲ್ಕೂವರೆ ವರ್ಷದ ಬಾಲಕಿ ಅದರೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ವಿಷಯ ತಿಳಿದು ತಲುಪಿದ ಅಗ್ನಿಶಾಮಕದಳ ಗಂಟೆಗಳ ಕಾಲ ನಡೆಸಿದ ಪ್ರಯತ್ನದಿಂದ ಬಾಲಕಿಯನ್ನು ರಕ್ಷಿಸಲಾಯಿತು.

ಚಟ್ಟಂಚಾಲ್ ಎಂಐಸಿ ಕಾಲೇಜು ಬಳಿಯ ಖದೀಜ ಎಂಬವರ ಪುತ್ರಿ ಫಾತಿಮ ಈ ರೀತಿ ಅಪಾಯದಲ್ಲಿ ಸಿಲುಕಿದ್ದಳು. ನಿನ್ನೆ ಸಂಜೆ ೬ ಗಂಟೆಗೆ ಈ ಘಟನೆ ನಡೆದಿದೆ. ಸಹೋದರಿಯೊಂದಿಗೆ ಆಟವಾಡುತ್ತಿದ್ದ ಫಾತಿಮ ರಸ್ತೆ ಕಾಮಗಾರಿಗಾಗಿ ತಂದಿರಿಸಿದ್ದ ಡಾಮರಿನ ಬ್ಯಾರೆಲ್‌ನೊಳಗೆ ಇಳಿದಿದ್ದಳು. ಬ್ಯಾರೆಲ್ ಸಮೀಪವಿದ್ದ ಕಲ್ಲಿನ ಮೇಲೇರಿ ಬಾಲಕಿ ಅದರೊಳಗೆ ಇಳಿದಿದ್ದಳೆನ್ನಲಾಗಿದೆ. ಬ್ಯಾರೆಲ್‌ನೊಳಗಿದ್ದ ಡಾಮರು ಬಾಲಕಿಯ ಎದೆವರೆಗೆ ತುಂಬಿಕೊಂಡಿತ್ತು. ಅದನ್ನು ಕಂಡ ಸಹೋದರಿ ತಾಯಿಯೊಂದಿಗೆ ತಿಳಿಸಿದ್ದಳು.  ವಿಷಯ ತಿಳಿದು ಸ್ಥಳೀಯರು ಹಾಗೂ  ಪೊಲೀಸರು ತಲುಪಿದರೂ ಬಾಲಕಿಯನ್ನು ಬ್ಯಾರೆಲ್‌ನಿಂದ ಹೊರ ತೆಗೆಯಲು ಸಾಧ್ಯವಾಗಲಿಲ್ಲ. ಬಿಸಿಲಿಗೆ ಡಾಮರು ಮೆದುವಾಗಿದ್ದ ಸಂದರ್ಭದಲ್ಲಿ ಬಾಲಕಿ ಬ್ಯಾರೆಲ್‌ನೊಳಗೆ ಇಳಿದಿದ್ದು, ಅನಂತರ ಅದು ಗಟ್ಟಿಯಾದುದರಿಂದ ರಕ್ಷಣಾ ಕಾರ್ಯಾಚರಣೆಗೆ ಸಮಸ್ಯೆ ಎದುರಾಯಿತು. ಇದರಿಂದ ಕಾಸರಗೋಡು ಅಗ್ನಿಶಾಮಕದಳ ಲೀಡಿಂಗ್ ಫಯರ್‌ಮೆನ್ ಸಣ್ಣಿಇಮ್ಮಾನುವಲ್  ನೇತೃತ್ವದ ಸಿಬ್ಬಂದಿಗಳು ಸ್ಥಳಕ್ಕೆ ತಲುಪಿದರು. ಅಗ್ನಿಶಾಮಕದಳ ಜತೆಗೆ ತಂದಿದ್ದ 30 ಲೀಟರ್ ಡೀಸೆಲ್ ಬ್ಯಾರೆಲ್‌ಗೆ ಎರೆದು ಡಾಮರು ಮೆದುಗೊಳಿಸಲಾಯಿತು. ಹೀಗೆ ಭಾರೀ ಪ್ರಯತ್ನ ನಡೆಸುವ ಮೂಲಕ ಡಾಮರನ್ನು ದ್ರವರೂಪಕ್ಕೆ ಬದಲಿಸಿದ ಬಳಿಕ ಬಾಲಕಿಯನ್ನು ಹೊರತೆಗೆಯಲಾಯಿತು. ಬ್ಯಾರೆಲ್‌ನಿಂದ ಬಾಲಕಿಯನ್ನು ಹೊರತೆಗೆದ ಬಳಿಕ ದೇಹದಿಂದ ಡಾಮರು ಬೇರ್ಪಡಿಸಲು ಭಾರೀ ಪ್ರಯತ್ನಿಸಬೇಕಾಗಿ ಬಂತು. ಅನಂತರ ಬಾಲಕಿಯನ್ನು ಚೆಂಗಳದ ಇ.ಕೆ. ನಾಯನಾರ್ ಆಸ್ಪತ್ರೆಗೆ ತಲುಪಿಸಲಾಯಿತು.

ಫಯರ್‌ಮೆನ್‌ಗಳಾದ ರಾಜೇಶ್ ಪಾವೂರ್, ಜಿತ್ತು ತೋಮಸ್, ಅಭಿಲಾಶ್, ಅರುಣ ಪಿ. ನಾಯರ್, ಚಾಲಕರಾದ ಪ್ರಸೀದ್, ರಮೇಶ್, ಹೋಂಗಾರ್ಡ್‌ಗಳಾದ ಸೋಜನ್ ಎಸ್, ರಾಜೇಶ್ ಎಂ.ಪಿ. ಮೊದಲಾದವರು ಅಗ್ನಿಶಾಮಕದಳದಲ್ಲಿದ್ದರು.  ಸಮಾನ ರೀತಿಯಲ್ಲಿ ಜಿಲ್ಲೆಯಲ್ಲಿ  ನಡೆದ ಎರಡನೇ ಘಟನೆಯಾಗಿದೆ  ನಿನ್ನೆ ಚಟ್ಟಂಚಾಲ್‌ನಲ್ಲಿ ಸಂಭವಿಸಿರುವುದು. ಈ ಹಿಂದೆ ಕಾಞಂಗಾಡ್‌ನಲ್ಲಿ ೧೧ರ ಹರೆಯದ ಬಾಲಕ ಇದೇ ರೀತಿ ಅಪಾಯದಲ್ಲಿ ಸಿಲುಕಿದ್ದನು.

RELATED NEWS

You cannot copy contents of this page