ಕಣ್ಣೂರು ಬಳಿ ವಾಹನ ಅಪಘಾತ: ಕಟ್ಟತ್ತಡ್ಕ ನಿವಾಸಿ ದಾರುಣ ಮೃತ್ಯು; ನಾಡಿನಲ್ಲಿ ಶೋಕಸಾಗರ
ಸೀತಾಂಗೋಳಿ: ಕಣ್ಣೂರು ಬಳಿಯ ಕಣ್ಣಪುರದಲ್ಲಿ ನಿನ್ನೆ ಸಂಭವಿಸಿದ ವಾಹನ ಅಪಘಾತದಲ್ಲಿ ಕಟ್ಟತ್ತಡ್ಕ ನಿವಾಸಿಯಾದ ಯುವಕ ದಾರುಣವಾಗಿ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.
ಕಟ್ಟತ್ತಡ್ಕ ಮುಹಿಮ್ಮಾತ್ ನಗರದಲ್ಲಿ ವಾಸಿಸುವ ಅರಂತೋಡು ಮುಹಮ್ಮದ್ ಹಾಜಿಯವರ ಪುತ್ರ ಅಬೂಬಕರ್ ಸಿದ್ದಿಕ್ (೨೦) ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ಇವರು ಸಂಚರಿಸುತ್ತಿದ್ದ ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಬೂಬಕರ್ ಸಿದ್ದಿಕ್ ಜೊತೆ ಬೈಕ್‌ನಲ್ಲಿದ್ದ ಸ್ನೇಹಿತ ಮಲಪ್ಪುರಂ ಪೊನ್ಮಾಳ ಚಪ್ಪನಂಗಾಡಿ ಪಾಳ ಹೌಸ್‌ನ ಅಲವಿಕುಟ್ಟಿ ಎಂಬವರ ಪುತ್ರ ಮುಹಮ್ಮದ್ ಅನ್ಸಾರ್ (೨೦) ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕಣ್ಣಪುರಂ ರೈಲ್ವೇ ನಿಲ್ದಾಣ ಸಮೀಪ ನಿನ್ನೆ ಬೆಳಿಗ್ಗೆ ಅಪಘಾತ ಸಂಭವಿಸಿದೆ. ಅಬೂಬಕರ್ ಸಿದ್ದಿಕ್ ಹಾಗೂ ಮುಹಮ್ಮದ್ ಅನ್ಸಾರ್ ಸಂಚರಿಸುತ್ತಿದ್ದ ಬೈಕ್‌ಗೆ ಕಣ್ಣೂರು ಭಾಗಕ್ಕೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಅಪಘಾತ ಸುದ್ದಿ ತಿಳಿದು ತಲುಪಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಅಬೂಬಕರ್ ಸಿದ್ದಿಕ್‌ರ ಜೀವ ಉಳಿಸಲು ಸಾಧ್ಯವಾಗಿಲ್ಲ. ಅಬೂಬಕರ್ ಸಿದ್ದಿಕ್ ಮಲಪ್ಪುರದ ಮುತ ಅಲ್ಲಿಂ ವಿದ್ಯಾರ್ಥಿಯಾಗಿದ್ದರು. ಮೃತದೇಹವನ್ನು ನಿನ್ನೆ ರಾತ್ರಿ ಊರಿಗೆ ತಲುಪಿಸಿ ನೂರಾರುಮಂದಿಯ ಅಂತಿಮ ನಮನದ ಬಳಿಕ ಇಂದು ಮುಂಜಾನೆ ೧ ಗಂಟೆ ವೇಳೆ ಕಟ್ಟತ್ತಡ್ಕ ಮುಹಿಮ್ಮಾತ್ ಬಳಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತರು ತಾಯಿ ಸಫಿಯಾ, ಸಹೋದರರಾದ ಶಬೀರ್, ಜಾಫರ್, ಜುನೈದ್, ಫಾರೂಕ್ ಹಾಗೂ ಓರ್ವೆ ಸಹೋದರಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.