ಕಣ್ಣೂರು ವಿಮಾನ ನಿಲ್ದಾಣದಲ್ಲಿ ಮುಂದುವರಿದ ಬೇಟೆ: ೭೯ ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ; ಇಬ್ಬರು ವಶಕ್ಕೆ
ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಳ್ಳ ಸಾಗಾಟವಾಗಿ ವಿದೇಶಗಳಿಂದ ಅಕ್ರಮವಾಗಿ ಚಿನ್ನ ಸಾಗಿಸುವ ದಂಧೆ ಇನ್ನೂ ಎಗ್ಗಿಲ್ಲದೆ ಮುಂದುವರಿಯುತ್ತಿದೆ.
ನಿನ್ನೆ ಇದೇ ವಿಮಾನ ನಿಲ್ದಾಣದಲ್ಲಿ ಏರ್ ಪೋರ್ಟ್ ಪೊಲೀಸರು ಮತ್ತು ಕಸ್ಟಮ್ಸ್ ನಡೆಸಿದ ಎರಡು ಭಿನ್ನ ಕಾರ್ಯಾಚರಣೆಗಳಲ್ಲಾಗಿ ಒಟ್ಟು ೭೯ ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಹಚ್ಚಿ ವಶಪಡಿಸಲಾಗಿದೆ. ಈ ಸಂಬಂಧ ಕಾಸರಗೋಡು ನಿವಾಸಿ ಸೇರಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಏರ್‌ಪೋರ್ಟ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ೪೬ ಲಕ್ಷ ರೂ. ಮೌಲ್ಯದ ೭೮೨.೯ ಗ್ರಾಂ ಚಿನ್ನ ಪತ್ತೆಹಚ್ಚಲಾಗಿದೆ. ಈ ಸಂಬಂಧ ಕಾಸರಗೋಡು ಮೊಗ್ರಾಲ್ ಪುತ್ತೂರಿನ ಅಹಮ್ಮದಲಿ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈತ ವಿಮಾನದಲ್ಲಿ ದುಬಾಯಿಂದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದನು. ವಿಮಾನ ನಿಲ್ದಾಣದ ಕಸ್ಟಮ್ಸ್ ತಂಡ ಆತನನ್ನು ತಪಾಸಣೆಗೊಳಪಡಿಸಿ ದಾಗ ಏನೂ ಪತ್ತೆಯಾಗಿರಲಿಲ್ಲ. ಕಸ್ಟಮ್ಸ್ ತಪಾಸಣೆ ಕಳೆದು ಹೊರಬಂದ ಆತನನ್ನು ಬಳಿಕ ಏರ್ ಪೋರ್ಟ್ ಪೊಲೀಸರು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಚಿನ್ನ ಪತ್ತೆಯಾಗಿದೆ. ಚಿನ್ನವನ್ನು ನಾಲ್ಕು ಮಾತ್ರೆಗಳ ರೂಪದಲ್ಲಾಗಿಸಿ ಅದನ್ನು ಆತ ತನ್ನ ಶರೀರದ ಒಳಭಾಗದಲ್ಲಿ ಬಚ್ಚಿಟ್ಟಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ದುಬಾಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಲಶ್ಶೇರಿ ನಿವಾಸಿ ಶಂಸೀರ್ ಎಂಬಾತನಿಂದ ೩೩,೧೯,೫೩೮ ರೂ. ಮೌಲ್ಯದ ೫೫೪.೧೮ ಚಿನ್ನವನ್ನು ಕಸ್ಟಮ್ಸ್ ತಂಡ ಪತ್ತೆ ಹಚ್ಚಿ ಆತನನ್ನು ವಶಕ್ಕೆ ತೆಗೆದುಕೊಂಡಿದೆ. ಚಿನ್ನವನ್ನು ಆತ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದನು.