ಕನ್ನಡ ಅವಗಣನೆ ವಿರುದ್ಧ ಮುಗಿಲುಮುಟ್ಟಿದ ಆಕ್ರೋಶ: ಕೋರಿಕಂಡ ಅಂಗನವಾಡಿ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ
ಅಡೂರು: ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲಾಗುತ್ತಿರುವ ಮಲತಾಯಿ ಧೋರಣೆ ಖಂಡನೀಯ. ಇಲ್ಲಿನ ಕನ್ನಡಿಗರಿಗೆ ನೀಡಿರುವ ವಿಶೇಷ ಅಧಿಕಾರಗಳು ಸಂವಿಧಾನಬದ್ಧ ಹಕ್ಕು ಆಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್ ನುಡಿದರು. ಅಂಗನವಾಡಿ ಮಟ್ಟದಲ್ಲಿ ಕನ್ನಡ ಶಿಕ್ಷಣವನ್ನು ನಾಮಾವಶೇಷಗೊಳಿಸುವ ಹುನ್ನಾರ ಮತ್ತು ಅನರ್ಹರನ್ನು ಶಿಕ್ಷಕಿಯರಾಗಿ ನೇಮಿಸಲು ರ‍್ಯಾಂಕ್ ಲಿಸ್ಟ್ ತಯಾರಿಸಿದ ದೇಲಂಪಾಡಿ ಪಂಚಾಯತ್ ಆಡಳಿತ ಸಮಿತಿ ವಿರುದ್ಧ ಅಡೂರು ಕೋರಿಕಂಡ ಅಂಗನವಾಡಿಯ ಕನ್ನಡ ಸಂರಕ್ಷಣಾ ಹೋರಾಟ ಸಮಿತಿ ನಿನ್ನೆ ಅಡೂರು ಪೇಟೆಯಿಂದ ಪಂಚಾಯತ್ ಕಾರ್ಯಾಲಯಕ್ಕೆ ನಡೆಸಿದ ಪ್ರತಿಭಟನಾ ಮೆರವಣಿಗೆ ಬಳಿಕ ನಡೆದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಅರಿಯದ ಶಿಕ್ಷಕಿಯನ್ನು ನೇಮಕ ಮಾಡಿದ್ದು, ಇದು ಸ್ವೀಕಾರಾರ್ಹವಲ್ಲ. ಇದರಿಂದ ಅಂಗನವಾಡಿಯ ಬಹುಸಂಖ್ಯಾತ ಕನ್ನಡ- ತುಳು ಭಾಷಿಗ ಪುಟಾಣಿಗಳ ಕಲಿಕೆ ಅತಂತ್ರವಾಗಲಿದೆ. ಕನ್ನಡ ವಿರೋಧಿ ಕ್ರಮಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಅವರು ಎಚ್ಚರಿಸಿದರು. ಹೋರಾಟಸಮಿತಿ ಅಧ್ಯಕ್ಷ ಅಶೋಕ ಸರಳಾಯ ಅಂಬತ್ತಿಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಲವು ಬಾರಿ ಈ ಬಗ್ಗೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಪರಿಹಾರ ಕಲ್ಪಿಸದೆ ಇರುವುದು ಖಂಡನೀಯವಾಗಿದ್ದು, ಇಂತಹ ಹುನ್ನಾರಗಳಿಗೆ ತಕ್ಕ ಬೆಲೆ ನೀಡಬೇಕಾದೀತು ಎಂದು ನುಡಿದರು. ಕಾಸರಗೋಡು ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಮಾತನಾಡಿ, ಕನ್ನಡಿಗರ ಶಾಂತ ಮನೋಸ್ಥಿತಿಯನ್ನು ಕೆದಕುವ, ತಾಳ್ಮೆ ಪರೀಕ್ಷಿಸುವ ಯತ್ನಗಳಿಗೆ ತಕ್ಕ ಉತ್ತರ ನೀಡಲಾಗುವುದು. ನ್ಯಾಯಾಲ ಯದ ತೀರ್ಪಿನ ಹೊರತಾಗಿಯೂ ಕನ್ನಡ ಅವಗಣನೆ ಯತ್ನ ಮುಂದುವರಿಯುತ್ತಿರುವುದು ಕಳವಳಕಾರಿ ಎಂದರು. ಜಯನಾರಾ ಯಣ ತಾಯನ್ನೂರು, ಸುಂದರ ಬಾರಡ್ಕ, ಪ್ರಮೀಳಾ ಸಿ. ನಾಯ್ಕ್, ಗಂಗಾಧರ ಅಡೂರು ಮಾತನಾಡಿದರು. ಹೋರಾಟ ಸಮಿತಿ ಕಾರ್ಯದರ್ಶಿ ನಯನ ಅಡೂರು ಪ್ರಸ್ತಾಪಿಸಿ, ಸ್ವಾಗತಿಸಿದರು. ಗಂಗಾಧರ ವಂದಿಸಿದರು. ಪ್ರತಿಭಟನೆ ಮೆರವಣಿಗೆಯ ಬಳಿಕ ಪಂಚಾಯತ್ ಅಧ್ಯಕ್ಷೆ ಉಷಾರನ್ನು ಭೇಟಿಯಾಗಿ ಹಕ್ಕು ಸಂರಕ್ಷಣೆಗಾಗಿ ಮನವಿ ಸಲ್ಲಿಸಲಾಯಿತು.