ಕರ್ನಾಟಕ ಮದ್ಯ ವಶ: ಸ್ಕೂಟರ್ ಸಹಿತ ಓರ್ವ ಸೆರೆ
ಕಾಸರಗೋಡು: ಚೆರ್ಕಳ ಪೇಟೆಯಲ್ಲಿ ಸ್ಕೂಟರ್ನಲ್ಲಿ ಬಂದು ಕರ್ನಾಟಕ ನಿರ್ಮಿತ ಮದ್ಯ ಮಾರಾಟ ಮಾಡಿದ ಆರೋಪದಂತೆ ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಮುಹಮ್ಮದ್ ಕಬೀರ್ರ ನೇತೃತ್ವದ ತಂಡ ಓರ್ವನನ್ನು ಬಂಧಿಸಿದೆ. ಮಾತ್ರವಲ್ಲ ೧೮೦ ಎಂ.ಎಲ್ನ ೧.೬೪ ಲೀಟರ್ ಮದ್ಯವನ್ನು ವಶಪಡಿಸಲಾಗಿದೆ. ಶಾಹಹಾನ್ ಎಂಬಾತ ಬಂಧಿತ ಆರೋಪಿ. ಆತನ ಸ್ಕೂಟರನ್ನು ವಶಪಡಿಸಲಾಗಿದೆ. ಈತ ಹಲವು ಅಬಕಾರಿ ಪ್ರಕರಣಗಳಲ್ಲಿ ಆರೋಪಿ ಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಅಭಿಲಾಷ್, ದೀಪು ಮತ್ತು ಚಾಲಕ ವಿಜಯನ್ ಎಂಬವರು ಒಳಗೊಂಡಿದ್ದಾರೆ. ಚೆರ್ಕಳದಲ್ಲಿ ಪ್ಯಾಕೇಟ್ ಒಂದಕ್ಕೆ ತಲಾ ೧೫೦ ರೂ.ನಂತೆ ಕರ್ನಾಟಕ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ಕಳೆದ ಎರಡು ದಿನಗಳಲ್ಲಾಗಿ ಕಾಸರಗೋಡು ಅಬಕಾರಿ ರೇಂಜ್ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಜೋಸೆಫ್ರ ನೇತೃತ್ವದಲ್ಲಿ ಪ್ರಿವೆಂಟಿವ್ ಆಫೀಸರ್ ಗಳಾದ ಮುಹಮ್ಮದ್ ಕಬೀರ್, ರಂಜಿತ್, ಶ್ರೀಕಾಂತ್ ಮತ್ತು ಸಿಇಒಗಳಾದ ಅತುಲ್, ಶರತ್, ಪ್ರಶಾಂತ್ ಕಣ್ಣನ್ ಮತ್ತು ಬಾಬು ಎಂಬವರನ್ನೊಳಗೊಂಡ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಮಾತ್ರವಲ್ಲ ವಾಹನಗಳನ್ನೂ ವಶಪಡಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ಅಬಕಾರಿ ಉಪ ಆಯುಕ್ತ ಜಯರಾಜ್ ಪಿ.ಕೆ. ಅವರು ನೀಡಿದ ನಿರ್ದೇಶ ಪ್ರಕಾರ ಈ ಕಾರ್ಯಾಚರಣೆ ನಡೆಸಲಾಗಿದೆ.