ಕರ್ನಾಟಕ ಮದ್ಯ, ಹುಳಿರಸ ವಶ: ಇಬ್ಬರ ಸೆರೆ
ಕಾಸರಗೋಡು: ಅಬಕಾರಿ ಅಧಿಕಾರಿಗಳ ತಂಡ ನಿನ್ನೆ ಜಿಲ್ಲೆಯ ವಿವಿಧೆಡೆಗಳಿಗೆ ನಡೆಸಿದ ಕಾರ್ಯಾ ಚರಣೆಯಲ್ಲಿ ಕರ್ನಾಟಕ ನಿರ್ಮಿತ ಮದ್ಯ ಹಾಗೂ ಕಳ್ಳಬಟ್ಟಿ ಸಾರಾಯಿ ತಯಾರಿಸಲೆಂದು ಸಿದ್ಧಪಡಿಸಲಾಗಿದ್ದ ವಾಶ್ (ಹುಳಿರಸ)ವನ್ನು ವಶಪಡಿಸಿಕೊಂಡಿದ್ದಾರೆ.
ಆದೂರು ಅಬಕಾರಿ ತಪಾಸಣಾ ಕೇಂದ್ರದಲ್ಲಿ ಪ್ರಿವೆಂಟಿವ್ ಆಫೀಸರ್ ಅಹಮ್ಮದ್ ಕಬೀರ್ ಬಿ.ಎಸ್. ನೇತೃತ್ವದ ತಂಡ ನಿನ್ನೆ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಸುಳ್ಯದಿಂದ ಕಾಸರಗೋಡಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದನ್ನು ಪರಿಶೀಲಿಸಿದಾಗ ಅದರಲ್ಲಿ 180 ಎಂಎಲ್‌ನ 45 ಟೆಟ್ರಾ ಪ್ಯಾಕೆಟ್ (8.1 ಲೀಟರ್)ಕರ್ನಾಟಕ ಮದ್ಯ ಪತ್ತೆಹಚ್ಚಲಾಗಿದೆ. ಅದಕ್ಕೆ ಸಂಬಂಧಿಸಿ ಬೇಡಡ್ಕ ಕುಂಡೂಚಿಯ ಬಾಲಕೃಷ್ಣನ್ ಟಿ.(45) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಅಬಕಾರಿ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ ಸಿಪಿಒಗಳಾದ ಪ್ರಭಾಕರನ್ ಎಂ.ಎ. ಒಳಗೊಂಡಿದ್ದರು. ಬದಿಯಡ್ಕ ಅಬಕಾರಿ ರೇಂಜ್ ಅಧಿಕಾರಿಗಳು ಈ ಪ್ರಕರಣದ ಮುಂದಿನ ತನಿಖೆ ಆರಂಭಿಸಿದ್ದಾರೆ.
ಇದೇ ರೀತಿ ಮುನ್ನಾಡ್ ಪೂಕು ನ್ನತ್ ಪಾರಾದಲ್ಲಿ ಬಂದಡ್ಕ ಎಕ್ಸೈಸ್ ರೇಂಜ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ಜಯರಾಜನ್ ಟಿ.ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಳ್ಳಭಟ್ಟಿ ಸಾರಾಯಿ ನಿರ್ಮಾಣ ಕೇಂದ್ರ ಪತ್ತೆಹಚ್ಚಲಾಗಿದೆ. ಅಲ್ಲಿಂದ 2 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ ಅಲ್ಲೇ ಪಕ್ಕದ ಶೆಡ್‌ವೊಂದರಿಂದ ಕಳ್ಳಭಟ್ಟಿ ಸಾರಾಯಿ ತಯಾರಿಸಲು ಸಿದ್ಧಪಡಿಸ ಲಾಗಿದ್ದ 15 ಲೀಟಲ್ ಹುಳಿರಸವನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಮುನ್ನಾಡು ಪೂಕುನ್ನತ್ ಪಾರಾದ ಬಾಬುರಾಜ್ (42)ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ (ಗ್ರೇಡ್) ಅಫ್ಸಲ್ ಕೆ, ಸಿಇಒಗಳಾದ ಪ್ರದೀಶ್ ಕೆ, ಮಹೇಶ್ ಕೆ, ಶಾಂತಿಕೃಷ್ಣ ಮತ್ತು ಚಾಲಕ ಮೈಕಲ್ ಎಂಬವರು ಒಳಗೊಂಡಿದ್ದರು.
ವೆಳ್ಳರಿಕುಂಡ್ ತಾಲೂಕಿನ ಕಳ್ಳಾರ್ ಕಾಂಞರತ್ತಡಿಯಲ್ಲಿ ಹೊಸದುರ್ಗ ಎಕ್ಸೈಸ್ ಇನ್ಸ್‌ಪೆಕ್ಟರ್ ತಂಬಿ ಎ.ಜೆ.ರ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆ ಯಲ್ಲಿ ಹಿತ್ತಿಲೊಂದರಲ್ಲಿ ಬಚ್ಚಿಡಲಾಗಿದ್ದ ೪೦ ಲೀಟರ್ ವಾಶ್ ಪತ್ತೆಹಚ್ಚಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.