ಕಳಮಶ್ಶೇರಿ ಪಾಲಿಟೆಕ್ನಿಕ್ ಹಾಸ್ಟೆಲ್ ಗಾಂಜಾ ಪ್ರಕರಣ: ಇನ್ನೂ ಇಬ್ಬರ ಸೆರೆ
ಕೊಚ್ಚಿ: ಕಳಮಶ್ಶೇರಿ ಪಾಲಿಟೆಕ್ನಿಕ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಸುಮಾರು ಎರಡು ಕಿಲೋ ಗಾಂಜಾ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾಸ್ಟೆಲ್‌ಗೆ ಗಾಂಜಾ ತಲುಪಿಸಿದ ಆರೋಪದಂತೆ ಆಲುವಾ ನಿವಾಸಿ ಆಶಿಕ್ ಮತ್ತು ಆತನ ಜತೆಗಿದ್ದ ಶಾರಿಮುಖ್ ಎಂಬವರು ಪೊಲೀಸರ ವಶಕ್ಕೊಳಗಾದ ಇತರ ಇಬ್ಬರು ಶಂಕಿತ ಆರೋಪಿಗಳಾಗಿದ್ದಾರೆ.
ಈ ಪೈಕಿ ಆಶಿಕ್ ಕಳಮಶ್ಶೇರಿ ಪಾಲಿಟೆಕ್ನಿಕ್ ಕಾಲೇಜಿನ ಹಳೆ ವಿದ್ಯಾರ್ಥಿಯೂ ಆಗಿದ್ದಾನೆ. ಈತನನ್ನು ನಿನ್ನೆ ರಾತ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಸ್ತುತ ಕಾಲೇಜಿನ ಇನ್ನಷ್ಟು ಹಳೆ ವಿದ್ಯಾರ್ಥಿಗಳು ಶಾಮೀಲಾ ಗಿರುವ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಪಾಲಿಟೆಕ್ನಿಕ್‌ನಲ್ಲಿ ಹೋಳಿ ಹಬ್ಬದ ಆಚರಣೆಗಾಗಿ ಗುಪ್ತವಾಗಿ ವಿದ್ಯಾರ್ಥಿಗಳಿಗೆ ಗಾಂಜಾ ವಿತರಿಸಲಾಗಿದೆ ಎಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.
ಒಂದು ಪ್ಯಾಕೆಟ್ ಗಾಂಜಾಕ್ಕೆ ೫೦೦ ರೂ. ವಸೂಲಿ ಮಾಡಲಾಗುತ್ತಿತ್ತೆಂಬ ಸೂಚನೆಯೂ ಪೊಲೀಸರಿಗೆ ಲಭಿಸಿದೆ. ಅದರ ಜಾಡು ಹಿಡಿದು ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ಈ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿ ಪ್ರಸ್ತುತ ಕಾಲೇಜಿನ ವಿದ್ಯಾರ್ಥಿಗಳಾದ ಕೊಲ್ಲಂ ಕುಳತ್ತ್‌ಪುಳ ನಿವಾಸಿ ಆಕಾಶ್ (21), ಆಲಪ್ಪುಳ ಕಾರ್ತಿಕಪಿಳ್ಳಿ ನಿವಾಸಿ ಆದಿತ್ಯನ್ (20) ಮತ್ತು ಕೊಲ್ಲಂ ಕರುನಾಗಪಳ್ಳಿ ನಿವಾಸಿ ಆರ್. ಅಭಿರಾಜ್ (21) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಪೈಕಿ ಆಕಾಶ್‌ನ ಹೊರತಾಗಿ ಇತರ ಇಬ್ಬರು ಆರೋಪಿಗಳನ್ನು ಪೊಲೀಸರು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.