ಕಳವಿಗಾಗಿ ಬಂದಿರುವ ಶಂಕೆ: ಕುಂಬಳೆ ನಿವಾಸಿ ಸಹಿತ ಮೂವರು ಕಣ್ಣೂರಿನಲ್ಲಿ ಸೆರೆ

ಕಾಸರಗೋಡು: ಕಳವು ನಡೆಸುವ ಉದ್ದೇಶದಿಂದ ಬಂದಿರುವುದಾಗಿ ಶಂಕೆ ಮೇರೆಗೆ ಕುಂಬಳೆ ನಿವಾಸಿ ಸಹಿತ ಮೂವರನ್ನು ಕಣ್ಣೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕುಂಬಳೆ ನಾಂಗಿ ಹೌಸಿನ ಕೆ. ಇಬ್ರಾಹಿಂ (೩೯), ಮಂಗಳೂರು ವಾಣಿಮಂಗಲದ ಅಕ್ಕರಂಗಾಡಿ ಕೆ. ಮೊಹಮ್ಮದ್ ಬಶೀರ್ (೩೨) ಮತ್ತು ಮಟ್ಟನ್ನೂರು ನೆಂಜಿಡತ್ತ ಕೆ. ವಿಜೇಶ್ (೩೦) ಬಂಧಿತ ಆರೋಪಿಗಳಾಗಿದ್ದಾರೆ.

ಕಣ್ಣೂರು ಜಿಲ್ಲಾ ಆಸ್ಪತ್ರೆಯ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಆ ದಾರಿಯಾಗಿ ಬಂದ ಕಾಸರಗೋಡು ರಿಜಿಸ್ಟ್ರೇಷನ್ ನಂಬ್ರ ಹೊಂದಿದ ಕಾರನ್ನು ಕಂಡು ನಿಲ್ಲಿಸುವಂತೆ ಅದಕ್ಕೆ ಕೈಸನ್ನೆ ಸೂಚಿಸಿದ್ದಾರೆ. ಆಗ ಕಾರನ್ನು ಪೊಲೀಸರು ತಪಾಸಣೆಗೊಳಪಡಿಸಿದಾಗ ಕಾರಿನೊಳಗಿನ ಆಸನದಡಿ ಭಾಗದಲ್ಲಿ ಬಚ್ಚಿಡಲಾದ ಕಬ್ಬಿಣದ ಸರಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅದರಿಂದ ಶಂಕೆಗೊಂಡು ಪೊಲೀಸರು, ಆ ಕಾರಿನೊಳಗಿದ್ದ ವಿಜೇಶ್, ಬಶೀರ್ ಮತ್ತು ಇಬ್ರಾಹಿಂರನ್ನು ತೀವ್ರ ವಿಚಾರಿಸಿದಾಗ ವಿಜೇಶ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ರುವುದನ್ನು ಮೊದಲು ಗುರುತು ಹಚ್ಚಿದ್ದಾರೆ. ಬಳಿಕ ಕಾರಿನ ಸಹಿತ ಆ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಒಯ್ದು ಅವರನ್ನು ಇನ್ನಷ್ಟು ತೀವ್ರ ವಿಚಾರಣೆಗೊಳಪಡಿಸಿದಾಗ ಆ ಮೂವರು ಹಲವು ಕಳವು ಪ್ರಕರಣಗಳಲ್ಲಿ ಆರೋಪಿಗ ಳಾಗಿರುವುದಾಗಿ ಸ್ಪಷ್ಟಗೊಂ ಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜೇಶ್‌ನ ಜತೆಗಿದ್ದ ಇತರ ಇಬ್ಬರು ಅಂತಾರಾಜ್ಯ ಕಳವು ತಂಡಕ್ಕೆ ಸೇರಿದವರೆಂದೂ, ಕಣ್ಣೂರಿನಲ್ಲಿ ಕಳವು ನಡೆಸುವ ಉದ್ದೇಶದಿಂದ ಇವರು ಕಾರಿನಲ್ಲಿ ಬಂದಿದ್ದರೆಂದು  ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ವಿಜೇಶ್‌ನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ೧೨ ಕೇಸುಗಳಿವೆ. ಕಳವು ಪ್ರಕರಣವೊಂದಕ್ಕೆ ಬಂಧಿತನಾಗಿ ಜೈಲು ಸೇರಿದ್ದ ಆತ ಕಳೆದ ತಿಂಗಳಲ್ಲಷ್ಟೇ ಜಾಮೀನಿನಲ್ಲಿ ಹೊರಬಂದಿದ್ದನು. ಇನ್ನು ಆತನ ಜತೆಗಿದ್ದ ಇತರ ಇಬ್ಬರ ಪೈಕಿ ಇಬ್ರಾಹಿಂ ಮತ್ತು ಬಶೀರ್ ಕೂಡಾ ಹಲವು ಕಳವು ಪ್ರಕರಣಗಳ ಆರೋಪಿಗಳಾಗಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page