ಕಾಞಂಗಾಡ್ನಿಂದ ಸ್ಕೂಟರ್ ಕಳವುಗೈದ ಮೊಗ್ರಾಲ್ ನಿವಾಸಿ ಬಂಧನ
ಕಾಸರಗೋಡು: ಕಾಞಂಗಾಡ್ ರೈಲ್ವೇ ನಿಲ್ದಾಣ ಪರಿಸರದಿಂದ ಸ್ಕೂಟರ್ ಕಳವುಗೈದ ಪ್ರಕರಣದಲ್ಲಿ ಆರೋಪಿ ಯಾದ ಮೊಗ್ರಾಲ್ ನಿವಾಸಿಯನ್ನು ಹೊಸದುರ್ಗ ಪೊಲೀಸರು ಸೆರೆಹಿಡಿದಿ ದ್ದಾರೆ. ಮೊಗ್ರಾಲ್ ಕೊಪ್ಪಳ ಹಸೀನ ಮಂಜಿಲ್ನ ಎಂ. ಮುಹಮ್ಮದ್ ಅನ್ಸಾರ್ (೫೭) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈ ತಿಂಗಳ ೭ರಂದು ಸ್ಕೂಟರ್ ಕಳವಿಗೀಡಾಗಿತ್ತು. ಮಂಗಳೂರಿನಲ್ಲಿ ವಿದ್ಯಾರ್ಥಿ ಯಾಗಿರುವ ಅದಿಂಞಾಲ್ ನಿವಾಸಿ ಅಶ್ಮಿಲ್ ರಹ್ಮತ್ತುಲ್ಲ ತನ್ನ ಸ್ಕೂಟರನ್ನು ಕಾಞಂಗಾಡ್ ರೈಲ್ವೇ ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿ ತೆರಳಿದ್ದರು. ಅಂದು ಸಂಜೆ ಮರಳಿದಾಗ ಸ್ಕೂಟರ್ ಕಾಣೆಯಾಗಿತ್ತು. ವಿವಿಧೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ೯ರಂದು ಸಂಜೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೂಡಲೇ ಹೊಸದುರ್ಗ ಇನ್ಸ್ಪೆಕ್ಟರ್ ಕೆ.ಪಿ. ಶೈನ್ ನೇತೃತ್ವದ ಪೊಲೀಸರು ರೈಲ್ವೇ ನಿಲ್ದಾಣ ಪರಿಸರದ ಸಿಸಿ ಟಿವಿಗಳನ್ನು ಪರಿಶೀಲಿಸಿದ್ದರು. ಪರಿಶೀಲನೆಯಲ್ಲಿ ಸ್ಕೂಟರನ್ನು ಓರ್ವ ಕೋಟಚ್ಚೇರಿ ಜಂಕ್ಷನ್ ಮೂಲಕ ಅದಿಂಞಾಲ್ ತೈಕಡಪ್ಪುರಂವರೆಗೆ ದೂಡಿ ಕೊಂಡೊಯ್ದು ಅಲ್ಲಿನ ವರ್ಕ್ ಶಾಪ್ವೊಂದರಲ್ಲಿ ಬೀಗ ಬದಲಿಸುವುದು ಗಮನಕ್ಕೆ ಬಂದಿದೆ. ಆ ವರ್ಕ್ಶಾಪ್ಗೆ ತೆರಳಿ ಪೊಲೀಸರು ತಪಾಸಣೆ ನಡೆಸಿದಾಗ ಒಬ್ಬಾತ ಸ್ಕೂಟರ್ನ ಕೀಲಿಕೈ ಕಳೆದುಹೋಯಿತೆಂದು ತಿಳಿಸಿ ಬೀಗ ಬದಲಾಯಿಸಿದ್ದಾನೆಂದು ತಿಳಿದುಬಂದಿದೆ. ಬಳಿಕ ಪೊಲೀಸರು ಸಿಸಿ ಟಿವಿಯಿಂದ ಸಂಗ್ರಹಿಸಿದ ದೃಶ್ಯಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಚಾರ ಮಾಡಿದ್ದರು. ಅದನ್ನು ಗಮನಿಸಿದ ನಾಗರಿಕರು ನೀಡಿದ ಮಾಹಿತಿ ಮೇರೆಗೆ ಮೊಗ್ರಾಲ್ನಿಂದ ಆರೋಪಿ ಎಂ. ಮುಹಮ್ಮದ್ ಅನ್ಸಾರ್ ಹಾಗೂ ಸ್ಕೂಟರನ್ನು ಪತ್ತೆಹಚ್ಚಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ.