ಕಾಡುಹಂದಿಯನ್ನು ಗುಂಡಿಕ್ಕಿ ಕೊಂದು ಮಾಂಸ ಮಾಡಿ ಸಾಗಿಸುತ್ತಿದ್ದ ಇಬ್ಬರ ಸೆರೆ: ಕಾರು, ಬಂದೂಕು, ಗುಂಡು ವಶಕ್ಕೆ
ಕಾಸರಗೋಡು: ಅರಣ್ಯದಿಂದ ಕಾಡುಹಂದಿಯನ್ನು ಬೇಟೆಯಾಡಿ ಗುಂಡಿಕ್ಕಿ ಕೊಂದು ಮಾಂಸ ಮಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಬೇಡಗ ಪೊಲೀಸ್ ಠಾಣೆ ಎಸ್‌ಐ ಗಂಗಾಧರನ್‌ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಬೇಡಗ ಪುತ್ಯಡ್ಕದ ಟಿ.ಕೆ. ಪ್ರಶಾಂತ್ ಕುಮಾರ್ (೩೭) ಮತ್ತು ಬೇಡಗ ಕಾಟಿಯಡ್ಕ ಕುವಾರ ಹೌಸ್‌ನ ರಾಧಾಕೃಷ್ಣನ್ ಕೆ. (೪೮) ಎಂಬವರು ಬಂಧಿತರಾದ ಆರೋಪಿಗಳು. ನಿನ್ನೆ ಮುಂಜಾನೆ ಕುಂಡಂಕುಳಿ ಬೆದಿರ ಭಾಗದಿಂದ ಮರುದಡ್ಕ ಭಾಗಕ್ಕೆ ತೆರಳುತ್ತಿದ್ದಾಗ ಬೇಟೆಗಾರರ ತಂಡ ಪೊಲೀಸರ ಸೆರೆಗೀಡಾಗಿದೆ. ಇವರು ಸಂ ಚರಿಸುತ್ತಿದ್ದ ಕಾರು, ಅದರೊಳಗಿದ್ದ ಹಂದಿ ಮಾಂಸ, ಒಂದು ಬಂದೂಕು ಮತ್ತು ಅದಕ್ಕೆ ಬಳಸುವ ೨೧ ಗುಂಡು (ಬುಲ್ಲೆಟ್)ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂದೂಕು ಲೈಸನ್ಸ್ ಇಲ್ಲದ್ದಾಗಿದೆ ಎಂದು ಸೆರೆಗೀಡಾದ ತಂಡ ಪೊಲೀಸರಲ್ಲಿ ತಿಳಿಸಿದ್ದಾರೆ. ಆದರೆ ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.