ಕಾಡು ಹಂದಿಗೆ ಇರಿಸಿದ ಸ್ಫೋಟಕ ವಸ್ತು ಸಿಡಿದು ಹಸುವಿಗೆ ಗಂಭೀರ ಗಾಯ
ಪಾಲಕ್ಕಾಡ್: ಕಾಡು ಹಂದಿಯನ್ನು ಕೊಲ್ಲಲು ಇರಿಸಿದ ಸ್ಫೋಟಕವಸ್ತು ಸಿಡಿದು ಹಸುವಿನ ಬಾಯಿಗೆ ಗಂಭೀರ ಗಾಯಗೊಂಡ ಘಟನೆ ಪಾಲಕ್ಕಾಡ್ ಪುದುನಗರ ಎಂಬಲ್ಲಿ ನಡೆದಿದೆ. ಕೊಯ್ಲು ಮುಗಿದ ಗದ್ದೆಯಲ್ಲಿ ಕಾಡು ಹಂದಿಯನ್ನು ಕೊಲ್ಲಲೆಂದು ಪರೋಟದೊಳಗೆ ಸ್ಫೋಟಕ ವಸ್ತುವನ್ನು ಇರಿಸಲಾಗಿತ್ತೆನ್ನಲಾಗಿದೆ. ಇದೇ ವೇಳೆ ಗದ್ದೆಯಲ್ಲಿ ಮೇಯುತ್ತಿದ್ದ ಹಸು ಪರೋಟವನ್ನು ತಿನ್ನಲು ಯತ್ನಿಸಿದೆ. ಅಷ್ಟರಲ್ಲಿ ಸ್ಫೋಟಕ ವಸ್ತು ಸಿಡಿದಿದ್ದು, ಇದರಿಂದ ಹಸುವಿನ ಬಾಯಿಗೆ ಗಂಭೀರಗಾಯಗಳಾಗಿವೆ. ಒಂದು ಲಕ್ಷ ರೂಪಾಯಿ ಮೌಲ್ಯವುಳ್ಳ ಹಸು ಹೆರಿಗೆಯಾಗಿ ೨೦ ದಿನಗಳು ಮಾತ್ರವೇ ಆಗಿದೆಯೆನ್ನಲಾಗಿದೆ. ಹಸುವಿಗೆ ಗಾಯವಾಗುವು ದರೊಂದಿಗೆ ಹಸುವಿನ ಮಾಲಕ ಪುದುನಗರ ನಿವಾಸಿ ಸತೀಶ್ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.
ಹಸುವಿನ ಹಾಲು ಮಾರಾಟ ನಡೆಸಿ ಸತೀಶ್ ಜೀವನ ಸಾಗಿಸುತ್ತಿದ್ದರು. ಸ್ಫೋಟಕವಸ್ತು ಇರಿಸಿದವರು ಯಾರೆಂದು ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿ ಪುದುನಗರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.