ಕಾಪಾ ಪ್ರಕರಣದ ಆರೋಪಿಯೊಂದಿಗೆ ಸಿಪಿಎಂಗೆ ಸೇರ್ಪಡೆಗೊಂಡ ಯುವಕನ ವಿರುದ್ಧ ಬೇರೊಂದು ಪ್ರಕರಣ
ಪತ್ತನಂತಿಟ್ಟ: ಪತ್ತನಂತಿಟ್ಟದಲ್ಲಿ ಕಾಪಾ ಪ್ರಕರಣದ ಆರೋಪಿಯೊಂದಿಗೆ ಸಿಪಿಎಂಗೆ ಸೇರ್ಪಡೆಗೊಂಡ ಸುಧೀಶ್ ಎಂಬಾತ ಡಿವೈಎಫ್‌ಐ ಕಾರ್ಯಕರ್ತರನ್ನು ಕೊಲೆಗೈಯ್ಯಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿಯೆಂದು ಹೇಳಲಾಗುತ್ತಿದೆ. ಸಚಿವೆ ವೀಣಾ ಜೋರ್ಜ್‌ರ ಚುನಾವಣಾ ಪ್ರಚಾರ ವೇಳೆ ಡಿವೈಎಫ್‌ಐ ಕಾರ್ಯಕರ್ತರ ಮೇಲೆ ಆಕ್ರಮಣ ನಡೆದಿತ್ತೆನ್ನಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ ತಕ್ಷಣ ಸಚಿವೆ ಹಾಗೂ ಜಿಲ್ಲಾ ಸೆಕ್ರೆಟರಿ ಸೇರಿ ಸುಧೀಶ್‌ನನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದರು. ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಸಚಿವೆ ಹಾಗೂ ಜಿಲ್ಲಾ ಸೆಕ್ರೆಟರಿ ಸೇರಿ ಪಕ್ಷಕ್ಕೆ ಸ್ವಾಗತಿಸಿದ ಬೆನ್ನಲ್ಲೇ ಹುಟ್ಟಿಕೊಂಡ ವಿವಾದಗಳು ಕೊನೆಗೊಂಡಿಲ್ಲ. ಕಾಪಾ ಪ್ರಕರಣದ ಆರೋಪಿಯೊಂದಿಗೆ ಪಕ್ಷಕ್ಕೆ ತಲುಪಿದ ಕುಂಬಳ ನಿವಾಸಿ ಸುಧೀಶ್ ಎಸ್‌ಎಫ್‌ಐ ಕಾರ್ಯಕರ್ತರ ಕೊಲೆಗೆ ಪ್ರಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಯಾಗಿದ್ದಾನೆಂಬ ಮಾಹಿತಿ ಇತ್ತೀಚೆಗೆ ಬಹಿರಂಗಗೊಂಡಿತ್ತು. 2021 ಎಪ್ರಿಲ್ 4ರಂದು ವೀಣಾ ರೋರ್ಜ್‌ರ ಚುನಾವಣಾ ಪ್ರಚಾರ ಕೊನೆಗೊಂಡು ಮರಳುತ್ತಿದ್ದ ಡಿವೈಎಫ್‌ಐ ಕಾರ್ಯಕರ್ತರ ಮೇಲೆ ಆಕ್ರಮಿಸಿದ ಪ್ರಕರಣದಲ್ಲಿ ಸುಧೀಶ್ ಆರೋಪಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಬಿಜೆಪಿ ಬಿಟ್ಟು ಸಿಪಿಎಂಗೆ ತಲುಪಿದೊಡನೆ ಯುವಕರೆಲ್ಲ ಉತ್ತಮ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆಂದು ಸಚಿವೆ ತಿಳಿಸಿದ್ದರು. ಇದೇ ವೇಳೆ ಸಚಿವೆ ವೀಣಾ ಜೋರ್ಜ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಇಂದು ಶಾಸಕರ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಲು ನಿರ್ಧರಿಸಿದೆ.