ಕಾರಡ್ಕ ಸೊಸೈಟಿ ವಂಚನೆ ಪ್ರಕರಣ: ಹಣ ಠೇವಣಿಯಿರಿಸಿದ ಗ್ರಾಹಕರು ಸಂದಿಗ್ಧತೆಯಲ್ಲಿ; ಸೆಕ್ರೆಟರಿ ರತೀಶನ್‌ಗಾಗಿ ಮುಂದುವರಿದ ಶೋಧ
ಮುಳ್ಳೇರಿಯ: ಕಾರಡ್ಕ ಅಗ್ರಿ ಕಲ್ಚರಿಸ್ಟ್ ವೆಲ್ಫೇರ್ ಕೋಆಪರೇಟಿವ್ ಸೊಸೈಟಿಯಿಂದ ಸೆಕ್ರೆಟರಿ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಪರಿಣಾಮ ಆ ಸೊಸೈಟಿಯ ಗ್ರಾಹಕರು ತೀವ್ರ ಸಂದಿಗ್ಧತೆಗೊಳಗಾಗಿರುವುದಾಗಿ ದೂರಲಾಗಿದೆ.
ಸೊಸೈಟಿಯಲ್ಲಿ ಹಣ ಚಿನ್ನಾಭರಣ ಠೇವಣಿಯಿರಿಸಿದ ಗ್ರಾಹಕರು ತಮ್ಮ ಚಿನ್ನ ಹಾಗೂ ಹಣವನ್ನು ಹೇಗೆ ಮರಳಿ ಪಡೆಯುವುದೆಂದು ತಿಳಿಯದೆ ಸಮಸ್ಯೆಗೀಡಾಗಿದ್ದಾರೆ. ಸೆಕ್ರೆಟರಿ ರತೀಶನ್‌ನಿಂದ ಹಣ ವಸೂಲಿ ಮಾಡಿ ಗ್ರಾಹಕರಿಗೆ ಮರಳಿ ನೀಡಲಾಗುವುದೆಂದು ಹೇಳಲಾಗುತ್ತಿದೆ. ವಂಚನೆ ಬಹಿರಂ ಗಗೊಂಡ ಬೆನ್ನಲ್ಲೇ ಸೊಸೈಟಿಯ ಚಟುವಟಿಕೆ ಅಸ್ತವ್ಯಸ್ತಗೊಂಡಿದೆ. ಹಣ ವ್ಯವಹಾರ ನಿಲುಗಡೆಗೊಂಡಿರು ವುದರಿಂದ ಅಗತ್ಯವುಳ್ಳವರಿಗೆ ೫೦೦೦ ರೂಪಾಯಿವರೆಗೆ ಮಾತ್ರವೇ ನೀಡಲಾಗುತ್ತಿದೆ. ಎರಡೂವರೆ ಲಕ್ಷ ರೂಪಾಯಿ ಠೇವಣಿಯಿರಿಸಿದ ಮುಂಡೋಳು ನಿವಾಸಿ ಎಂಡೋ ಸಲ್ಫಾನ್‌ಸಂತ್ರಸ್ತರೊಬ್ಬರು ಒಂದು ಲಕ್ಷ ರೂಪಾಯಿ ಚಿಕಿತ್ಸೆಗಾಗಿ ಆಗ್ರಹಪಟ್ಟಿದ್ದರು. ಆದರೆ ಅವರಿಗೆ ೫೦೦೦ ರೂಪಾಯಿ ಮಾತ್ರವೇ ನೀಡಲಾಗಿತ್ತು. ಬಳಿಕ ಜಿಲ್ಲಾಧಿಕಾರಿ ನಿರ್ದೇಶಿಸಿದುದರಿಂದ ಆಗ್ರಹಿಸಿದ ಹಣ ನೀಡಲಾಗಿದೆ.
ಸೊಸೈಟಿಯ ಕಾರ್ಯದರ್ಶಿಯೂ ಸಿಪಿಎಂ ನೇತಾರನಾದ ಕೆ. ರತೀಶನ್ ಸೊಸೈಟಿಯಿಂದ ೪.೭೬ ಕೋಟಿ ರೂಪಾಯಿಗಳ ಹಣ ಹಾಗೂ ಚಿನ್ನಾಭರಣಗಳನ್ನು ಲಪಟಾಯಿಸಿ ರುವುದಾಗಿ ದೂರಲಾಗಿದೆ. ಈ ಬಗ್ಗೆ ಸೊಸೈಟಿಯ ಅಧ್ಯಕ್ಷ ಕೆ. ಸೂಪಿ ನೀಡಿದ ದೂರಿನಂತೆ ಈ ತಿಂಗಳ ೧೩ರಂದು ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಘಟನೆ ಬಳಿಕ ತಲೆಮರೆಸಿಕೊಂಡ ಕೆ. ರತೀಶನ್‌ನನ್ನು ಇದುವರೆಗೆ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಮೊದಲು ಆದೂರು ಪೊಲೀಸರು ತನಿಖೆ ನಡೆಸಿದ ಈ ಪ್ರಕರಣವನ್ನು ಬಳಿಕ ಜಿಲ್ಲಾ ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು. ಕ್ರೈಂಬ್ರಾಂಚ್‌ಗೆ ತನಿಖೆ ಹಸ್ತಾಂತರಿಸಿ ಎರಡು ವಾರವಾದರೂ ರತೀಶನ್‌ನನ್ನು ತ್ತೆಹಚ್ಚಲಾಗಲಿಲ್ಲ. ರತೀಶನ್‌ನನ್ನು ಪತ್ತೆಹಚ್ಚಲು ತನಿಖಾ ತಂಡ ಬೆಂಗಳೂರು, ಹಾಸನ, ಮೈಸೂರು, ಶಿವಮೊಗ್ಗ ಮೊದಲಾದೆಡೆಗಳಿಗೆ ತೆರಳಿ ಶೋಧ ನಡೆಸಿದರೂ ಪ್ರಯೋಜನ ವಾಗಲಿಲ್ಲ.ರತೀಶನ್ ಸೊಸೈಟಿಯಿಂದ ಲಪಟಾಯಿಸಿದ ಚಿನ್ನಾಭರಣಗಳನ್ನು ಇತರ ಬ್ಯಾಂಕ್‌ಗಳಲ್ಲಿ ಅಡವಿರಿಸಲು ಸಹಾಯ ಮಾಡಿದ ಮೂವರನ್ನು ಬಂಧಿಸಿ, ಬಹುಪಾಲು ಚಿನ್ನವನ್ನು ಪತ್ತೆಹಚ್ಚಿ ವಶಪಡಿಸಿರುವುದು ಮಾತ್ರವೇ ಅಲ್ಪ ನೆಮ್ಮದಿ ಮೂಡಿಸಿದೆ. ರತೀಶನ್ ತಲೆಮರೆಸಿಕೊಂಡಿದ್ದರೂ ವಾಟ್ಸಪ್ ಮೂಲಕ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದಾನೆನ್ನಲಾಗಿದೆ. ಹಾಗಾದರೂ ಪತ್ತೆಹಚ್ಚಲು ಸಾಧ್ಯವಾಗದಿರುವುದು ತನಿಖಾ ತಂಡದ ಲೋಪವಾಗಿದೆಯೆಂದು ಆರೋಪ ಕೇಳಿ ಬರುತ್ತಿದೆ.