ಕಾರಿನಲ್ಲಿ ಎಂಡಿಎಂಎ ಸಾಗಾಟ ಪ್ರಕರಣ: ಇಬ್ಬರು ಆರೋಪಿಗಳಿಗೆ 10 ವರ್ಷ ಸಜೆ, ಜುಲ್ಮಾನೆ
ಕಾಸರಗೋಡು: ಕಾರಿನಲ್ಲಿ ಮಾದಕ ದ್ರವ್ಯವಾದ 56.500 ಗ್ರಾಂ ಎಂಡಿಎಂಎ ಸಾಗಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರ ಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ತಲಾ 10 ವರ್ಷ ಕಠಿಣ ಸಜೆ ಹಾಗೂ 1 ಲಕ್ಷ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
ಪಚ್ಚಂಬಳ ರೆಹಮ್ಮತ್ ರಾಬಿಯಾ ಮಂಜಿಲ್‌ನ ಮೊಹ ಮ್ಮದ್ ಹ್ಯಾರಿಸ್ (32) ಮತ್ತು ಇಚ್ಲಂಗೋಡು ಪಚ್ಚಂಬಳ ಹೌಸ್‌ನ ಇಬ್ರಾಹಿಂ ಬಾದ್‌ಶಾ (32) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋ ಪಿಗಳು ಆರು ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಇದೇ ಪ್ರಕರಣದ ಇನ್ನೋರ್ವ ಆರೋಪಿ ಕಯ್ಯಾರು ನಿವಾಸಿ ಅಬ್ದುಲ್ ಸಮದ್ ೩೦ ಎಂಬಾತನ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
2023 ಮೇ 14ರಂದು ಮಂಜೇಶ್ವರಕ್ಕೆ ಸಮೀಪದ ವಾಮಂಜೂರಿನಲ್ಲಿ ಅಂದು ಮಂಜೇಶ್ವರ ಪೊಲೀಸ್ ಠಾಣೆ ಎಸ್‌ಐ ಆಗಿದ್ದ ಪಿ. ಅನೂಪ್‌ರ ನೇತೃತ್ವದ ಪೊಲೀಸರ ತಂಡ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆ ದಾರಿಯಾಗಿ ಬಂದ ಕಾರಿನಿಂದ ಎಂಡಿಎಂಎ ವಶಪಡಿಸಿಕೊಂಡು ಅದಕ್ಕೆ ಸಂಬಂಧಿಸಿ ಈ ಮೂವರು ಆರೋಪಿಗಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಆ ಬಳಿಕ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಟಿ.ಪಿ. ರಜೀಶ್, ರಾಜೀವ್ ಕುಮಾರ್ ಮತ್ತು ಸಂತೋಷ್ ಕುಮಾರ್ ಈ ಬಗ್ಗೆ ಮುಂದಿನ ತನಿಖೆ ನಡೆಸಿ ಆ ಪೈಕಿ ಇನ್ಸ್‌ಪೆಕ್ಟರ್ ಟಿ.ಪಿ. ರಜೀಶ್ ಈ ಪ್ರಕರಣದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಪ್ರೋಸಿಕ್ಯೂಟರ್ ಪಿ. ಸತೀಶನ್ ಮತ್ತು ನ್ಯಾಯವಾದಿ ಅಂಬಿಳಿ ನ್ಯಾಯಾಲಯದಲ್ಲಿ ವಾದಿಸಿದ್ದರು.