ಕಾರಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣ: ಆರೋಪಿಗೆ ಮೂರು ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಕೆ. ಪ್ರಿಯ ಮೂರು ವರ್ಷ ಕಠಿಣ ಸಜೆ ಮತ್ತು 3೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ತಲಶ್ಶೇರಿ ಮುಳಪ್ಪಿಲಂಗಾಡ್ ಕಸ್ಟಮ್ಸ್  ಕಚೇರಿಗೆ ಸಮೀಪ ರುಬಿಯಾ ಕ್ವಾರ್ಟರ್ಸ್‌ನ ನಿವಾಸಿ ಕೆ.ವಿ. ಅರ್ಶಾದ್ (25) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.

ಈ ಪ್ರಕರಣದ ಇತರ ಆರೋಪಿಗಳಾದ ಎನ್.ಕೆ. ಸಲ್ಮಾನ್ ಮತ್ತು ಕೆ. ಮೊಹಮ್ಮದ್ ಶರೀಫ್ ತಲೆಮರೆಸಿಕೊಂಡಿದ್ದಾರೆ. 2020 ಜೂನ್ 2ರಂದು  ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಕೆ. ವಿನೋದ್ ಕುಮಾರ್ ನೇತೃತ್ವದ ಪೊಲೀಸರ ತಂಡ  ಕುಂಬಳೆ-ಸೀತಾಂಗೋಳಿ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಆ ದಾರಿಯಾಗಿ ಬಂದ ಕಾರನ್ನು ನಿಲ್ಲಿಸಲು ಕೈಸನ್ನೆ ತೋರಿಸಿದರು. ಆದರೆ ಕಾರು ನಿಲ್ಲದೆ ಪರಾರಿಯಾಗಿತ್ತು. ತಕ್ಷಣ ಪೊಲೀಸರು  ಅದನ್ನು ಬೆನ್ನಟ್ಟಿಕೊಂಡು ಹೋಗಿ ಅವರನ್ನು ವಶಕ್ಕೆ ತೆಗೆದು ಪರಿಶೀಲಿಸಿದಾಗ ಅದರಲ್ಲಿ ಆರು ಕಿಲೋ ಗಾಂಜಾ ಪತ್ತೆಯಾಗಿತ್ತು. ಅದಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ದಾಖಲಿಸಿದ ಆರೋಪಿಗಳನ್ನು ಬಂಧಿಸಿದ್ದರು.

ಆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಲ್ಲೋರ್ವನಾದ ಅರ್ಶಾದ್‌ಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.  ಅಂದು ಕುಂಬಳೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಆಗಿದ್ದ ಪಿ.ಪ್ರಮೋದ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಜೆ. ಚಂದ್ರಮೋಹನ್ ಮತ್ತು ನ್ಯಾಯವಾದಿ ಚಿತ್ರಕಲಾ ನ್ಯಾಯಾಲಯದಲ್ಲಿ ವಾದಿಸಿದ್ದರು.

You cannot copy contents of this page