ಕಾರಿನಲ್ಲಿ ಸಾಗಿಸುತ್ತಿದ್ದ 337 ಲೀಟರ್ ವಿದೇಶ ಮದ್ಯ ವಶ: ಇಬ್ಬರ ಬಂಧನ
ಕುಂಬಳೆ: ತಿಂಗಳ ಮೊದಲ ದಿನವಾದ ಇಂದು ಮದ್ಯದಂಗಡಿಗಳು ತೆರೆಯದಿರುವುದನ್ನು ಸದುಪ ಯೋಗಪಡಿಸಿಕೊಂಡು ಜಿಲ್ಲೆಯಲ್ಲಿ ಮಾರಾಟಕ್ಕಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 337 ಲೀಟರ್ ವಿದೇಶ ಮದ್ಯವನ್ನು ಕುಂಬಳೆ ಬಳಿ ಅಬಕಾರಿ ಅಧಿಕಾರಿಗಳು ಅತೀ ಸಾಹಸಿಕವಾಗಿ ವಶಪಡಿಸಿ ಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಶಲ್ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ಮದ್ಯ ವಶಪಡಿಸಲಾಗಿದೆ. ಈ ಸಂಬಂಧ ಕುಳೂರು ಚಾರ್ಲ ನಿವಾಸಿ ಮೀಂಜ ವಿಲ್ಲೇಜ್‌ನ ವಿನೀತ್ ಶೆಟ್ಟಿ (25), ಮೀಂಜ ವಿಲ್ಲೇಜ್‌ನ ಚಿಗುರುಪದವು ನಿವಾಸಿ ಸಂತೋಷ್ (25) ಎಂಬಿವರನ್ನು ಬಂಧಿಸಲಾಗಿದೆ. ಮದ್ಯ ಸಾಗಾಟಕ್ಕಾಗಿ ಬಳಸಿದ ಕಾರನ್ನು ವಶಪಡಿಸಲಾಗಿದೆ. ನಿನ್ನೆ ರಾತ್ರಿ ಕುಂಬಳೆ ಆರಿಕ್ಕಾಡಿ ಪೇಟೆಯಲ್ಲಿ ಪ್ರಿವೆಂಟಿವ್ ಆಫೀಸರ್ ಸಾಜನ್ ಅಪ್ರಾಲ್ ಹಾಗೂ ತಂಡ ನಡೆಸಿದ ದಾಳಿ ವೇಳೆ ಮದ್ಯ ಪತ್ತೆಯಾಗಿದೆ. ಮದ್ಯ ಸಾಗಿಸುತ್ತಿದ್ದ ಕಾರನ್ನು ಅಬಕಾರಿ ತಂಡ ತಲಪಾಡಿಯಿಂದಲೇ ಹಿಂಬಾಲಿಸಿಕೊಂಡು ಬಂದಿದ್ದು, ಆರಿಕ್ಕಾಡಿಗೆ ತಲುಪಿದಾಗ ಕಾರನ್ನು ಅಡ್ಡಗಟ್ಟಿ ತಪಾಸಣೆ ನಡೆಸಲಾಯಿತು. ಈ ವೇಳೆ ಹಿಂಬದಿ ಸೀಟಿನ ಅಡಿಯಲ್ಲಿ 21 ಲೀಟರ್ ಕರ್ನಾಟಕ ಮದ್ಯ, 120 ಲೀಟರ್ ಗೋವಾ ನಿರ್ಮಿತ ಮದ್ಯ ಪತ್ತೆಯಾಗಿದೆ. ಕೂಡಲೇ ಕಾರಿನಲ್ಲಿದ್ದ ಇಬ್ಬರನ್ನು ಕಸ್ಟಡಿಗೆ ತೆಗೆದು ಕೇಸು ದಾಖಲಿಸಲಾಯಿತು. ಬಳಿಕ ವಶಪಡಿಸಿದ ವಸ್ತುಗಳು ಹಾಗೂ ಪ್ರಕರಣವನ್ನು ಕುಂಬಳೆ ಅಬಕಾರಿ ರೇಂಜ್ ಕಚೇರಿಯಲ್ಲಿ ಹಾಜರು ಪಡಿಸಲಾಯಿತು.
ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ಮೈಮೋಳ್ ಜೋನ್, ಮಂಜುನಾಥನ್ ವಿ, ನಸರುದ್ದೀನ್ ಎ.ಕೆ, ಸೋನು ಸೆಬಾಸ್ಟಿಯನ್, ಸಿವಿಲ್ ಎಕ್ಸೈಸ್ ಆಫೀಸರ್ ಹಾಗೂ ಚಾಲಕನಾದ ಕ್ರಿಸ್ಟಿನ್ ಪಿ.ಎ. ಎಂಬಿವರು ಕಾರ್ಯಾಚರಣೆ ನಡೆದ ತಂಡದಲ್ಲಿದ್ದರು.