ಕಾರಿನಲ್ಲಿ ಸಾಗಿಸುತ್ತಿದ್ದ ೯೦ ಕಿಲೋ ಗಾಂಜಾ ಸಹಿತ ಓರ್ವ ಸೆರೆ: ಇನ್ನೋರ್ವ ಪರಾರಿ
ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ೯೦ ಕಿಲೋ ಗಾಂಜಾ ಸಹಿತ ಓರ್ವನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇನ್ನೋರ್ವ ಓಡಿ ಪರಾರಿಯಾಗಿದ್ದಾನೆ. ನಿನ್ನೆ ರಾತ್ರಿ ೧೦.೩೦ರ ವೇಳೆ ಬಾಯಿಕಟ್ಟೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಣ್ಣೂರು ಕೂತುಪರಂಬ ಕಣ್ಣವಂ ನಿವಾಸಿಯೂ ಈಗ ತೃಕ್ಕರಿಪುರದಲ್ಲಿ ವಾಸಿಸುವ ರೈಫ್ ಬಶೀರ್ (೩೧) ಎಂಬಾತ ಸೆರೆಗೀಡಾಗಿದ್ದಾನೆ. ಓಡಿ ಪರಾರಿಯಾದ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆ. ಕಾಞಂಗಾಡ್ ಡಿವೈಎಸ್ಪಿ ಪಿ. ಬಾಲಕೃಷ್ಣನ್ ನಾಯರ್‌ಗೆ ಲಭಿಸಿದ ಗುಪ್ತ ಮಾಹಿತಿ ಆಧಾರದಲ್ಲಿ ಗಾಂಜಾ ಬೇಟೆ ನಡೆಸಲಾಗಿದೆ.
ಡಿವೈಎಸ್‌ಪಿಯವರ ಸ್ಕ್ವಾಡ್ ಸದಸ್ಯರಾದ ಎಎಸ್‌ಐ ಅಬೂಬಕರ್ ಕಲ್ಲಾಯಿ, ಸಿಪಿಒಗಳಾದ ಶಾಜು, ದಿನೇಶ್, ಶಜೀಶ್ ಎಂಬಿವರು ಖಾಸಗಿ ವಾಹನದಲ್ಲಿ ಬಾಯಾರು- ಕೈಕಂಬ ರೂಟ್‌ನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಗಾಂಜಾ ಸಾಗಾಟ ತಂಡದ ಚಲನವಲನಗಳನ್ನು ಯಥಾ ಸಮಯಗಳಲ್ಲಿ ಡಿವೈಎಸ್‌ಪಿಯ ಸ್ಕ್ವಾಡ್ ಸದಸ್ಯರಿಗೆ ತಿಳಿಸಲಾಯಿತು. ಇದೇ ವೇಳೆ ಮಹಾರಾಷ್ಟ್ರ ನೋಂದಾವಣೆಯ ಕಾರು ತಲುಪಿದ್ದು ಅದನ್ನು ಪೊಲೀಸರು ಹಿಂಬಾಲಿಸಿದ್ದಾರೆ. ಕಾರು ಬಾಯಿಕಟ್ಟೆಗೆ ತಲುಪಿದಾಗ ಗಾಂಜಾ ಸಾಗಾಟ ತಂಡ ದಾರಿ ತಪ್ಪಿಸಲಿದೆಯೆಂಬ ಸಂಶಯದ ಮೇರೆಗೆ ಪೊಲೀಸ್ ತಂಡ ಕಾರನ್ನು ತಡೆದು ನಿಲ್ಲಿಸಿದೆ. ಅಷ್ಟರಲ್ಲಿ ಕಾರಿನಿಂದಿಳಿದು ಓರ್ವ ಓಡಿ ಪರಾರಿಯಾಗಿದ್ದಾನೆ. ಕೂಡಲೇ ರೈಫ್ ಬಶೀರ್‌ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈ ಮಧ್ಯೆ ಮಂಜೇಶ್ವರ ಎಸ್.ಐ.ಗಳಾದ ರುಮೇಶ್, ನಿಖಿಲ್ ಸುಮೇಶ್‌ರಾಜ್, ಚಾಲಕ ಆರಿಫ್ ಎಂಬಿವರು ಕೂಡಾ ಸ್ಥಳಕ್ಕೆ ತಲುಪಿದ್ದಾರೆ. ಬಳಿಕ ಢಿಕ್ಕಿ ತೆರೆದು ಪರಿಶೀಲಿಸಿದಾಗ ಅದರಲ್ಲಿ ೯೦ ಕಿಲೋ ಗಾಂಜಾವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಬಚ್ಚಿಟ್ಟಿರುವುದು ಕಂಡು ಬಂದಿದೆ.