ಕಾರು ತಡೆದು ನಿಲ್ಲಿಸಿ ಯುವಕ, ಪೊಲೀಸರ ಮೇಲೆ ಹಲ್ಲೆ: 20ಮಂದಿ ವಿರುದ್ಧ ಕೇಸು; ನಾಲ್ವರ ಸೆರೆ
ಕಾಸರಗೋಡು: ತಂಡವೊಂದು ಕಾರನ್ನು ತಡೆದು ನಿಲ್ಲಿಸಿ ಮಂಗಳೂರು ನಿವಾಸಿ ಮೇಲೆ ಹಲ್ಲೆ ನಡೆಸಿ ಆತನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಲೆತ್ನಿಸಿದಾಗ ಆಕ್ರಮಿಗಳ ತಂಡ ಅವರ ಮೇಲೂ ಹಲ್ಲೆ ನಡೆಸಿದ ಘಟನೆ ಮೊಗ್ರಾಲ್ ಪುತ್ತೂರಿನ ಬಳಿ ನಡೆದಿದೆ. ಇದಕ್ಕೆ ಸಂಬಂಧಿಸಿ ನೀಡಲಾದ ದೂರಿನಂತೆ ಕಾಸರಗೋಡು ಪೊಲೀಸರು ದಾಖಲೆಸಿಕೊಂಡ ಎರಡು ಪ್ರಕರಣಗಳಲ್ಲಾಗಿ ಒಟ್ಟು 20 ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಈ ಪೈಕಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಕೋಟೆಕ್ಕಾರ್ ಕೊಲ್ಯ ನಿವಾಸಿ ಮುಹಮ್ಮದ್ ಮುಫೀದ್ (31) ಗಾಯಗೊಂಡ ಯುವಕ.
ಮಾ. ೧೫ರಂದು ರಾತ್ರಿ ಮೊಗ್ರಾಲ್ ಪುತ್ತೂರು ಕಂಬಾರ್ ಬೆದ್ರಡ್ಕದಲ್ಲಿ ಈ ಘಟನೆ ನಡೆದಿದೆ. ತಾನು ಸ್ನೇಹಿತನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ತಂಡವೊಂದು ಕಾರನ್ನು ತಡೆದು ನಿಲ್ಲಿಸಿ ಬೆದರಿಕೆ ಒಡ್ಡಿ ಕಲ್ಲಿನಿಂದ ತನಗೆ ಹೊಡೆದು ಗಾಯಗೊಳಿಸಿರು ವುದಾಗಿಯೂ, ಕಾರಿನಲ್ಲಿ ಇದ್ದ ೧೦,೦೦೦ದಷ್ಟು ಹಣವನ್ನು ಆ ತಂಡ ತೆಗೆದು ಸಾಗಿಸಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಗಾಯಾಳು ಮುಫೀದ್ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಕೂಡ್ಲು ನಿವಾಸಿ ಶಿವಕುಮಾರ್ ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘರ್ಷಣೆ ವಿಷಯ ತಿಳಿದು ಘಟನೆ ನಡೆದ ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡ ಮುಫೀದ್‌ನನ್ನು ಆಸ್ಪತ್ರೆಗೆ ಸಾಗಿಸಲೆತ್ನಿಸಿದ ವೇಳೆ, ಪೊಲೀಸ್ ವಾಹನವನ್ನು ತಡೆದು ನಿಲ್ಲಿಸಿ ಅದರಲ್ಲಿದ್ದ ಸಿವಿಲ್ ಪೊಲೀಸ್ ಆಫೀಸರ್ ನಿವಿಲಿ (35)ರ ಮೇಲೆ ಹಲ್ಲೆ ನಡೆಸಿ ಆ ಮೂಲಕ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿರುವುದಾಗಿ ಆರೋಪಿ ನಿವಿಲಿಯವರು ನೀಡಿದ ದೂರಿನಂತೆ ಕೂಡ್ಲಿನ ಪ್ರದೀಪ್ ಕುಮಾರ್ ಸೇರಿದಂತೆ ಒಟ್ಟು 10 ಮಂದಿಯ ವಿರುದ್ಧ ಪೊಲೀಸರು ಬೇರೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.