ಕಾಸರಗೋಡಿನಲ್ಲಿ ಎರಡು ಅಪಘಾತ: ವಿದ್ಯಾರ್ಥಿ ಸಹಿತ ಇಬ್ಬರು ಮೃತ್ಯು
ಕಾಸರಗೋಡು: ಕಾಸರಗೋಡು ನಿನ್ನೆ ಒಂದು ದುರಂತದಿನವಾಗಿ ಮಾರ್ಪಟ್ಟಿದೆ. ನಿನ್ನೆ ಮಾತ್ರವಾಗಿ ನಡೆದ ಎರಡು ರೈಲು ಅಪಘಾತಗಳಲ್ಲಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.
ಮಂಗಳೂರು ಪಿ.ಎ ಕಾಲೇಜ್ ಆಫ್ ಇಂಜಿನಿಯ ರಿಂಗ್ನ ಪ್ರಥಮ ವರ್ಷದ ವಿದ್ಯಾರ್ಥಿ ಹಾಗೂ ಕಣ್ಣೂರು ಕೂತುಪರಂಬ ಸರಕಾರಿ ಆಸ್ಪತ್ರೆ ಬಳಿಯ ರಿಯಾಸಿಲ್ ಮೊಹಮ್ಮದ್ ರಾಫಿ ಎಂಬವರ ಪುತ್ರ ರನೀಮ್ (೧೮) ಮತ್ತು ಒಡಿಸ್ಸಾ ಜಾಸ್ಪುರ್ ನಿವಾಸಿ ಸುಶಾಂತ್ ಸಾಹು (೪೧) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ರನೀಮ್ ತನ್ನ ಸ್ನೇಹಿತರೊಂದಿಗೆ ನಿನ್ನೆ ಮಧ್ಯಾಹ್ನ ಮಂಗಳೂರಿನಿಂದ ಚೆನ್ನೈಗೆ ಸಂಚರಿಸುತ್ತಿದ್ದ ಚೆನ್ನೈ ಮೈಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಾರಿ ಮಧ್ಯೆ ಕುಂಬಳೆ ದಾಟಿದ ಬಳಿಕ ಆತ ರೈಲಿನಿಂದ ದಿಢೀರಾಗಿ ಹೊರಕ್ಕೆಸೆ ಯಲ್ಪಟ್ಟನು. ಅದನ್ನು ಕಂಡ ಸ್ನೇಹಿ ತರು ತಕ್ಷಣ ಆ ಬಗ್ಗೆ ಪೊಲೀಸರನ್ನು ಕರೆದು ಮಾಹಿತಿ ನೀಡಿದರು. ಅದರಂತೆ ಪೊಲೀಸರು ರೈಲ್ವೇ ಭದ್ರತಾಪಡೆ ಮತ್ತು ಅಗ್ನಿಶಾಮಕದಳ ವ್ಯಾಪಕ ಶೋಧ ಆರಂಭಿಸಿದರೂ ಸಂಜೆ ತನಕ ರನೀಮ್ನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆ ಬಳಿಕವೂ ಮುಂದುವರಿಸಿದ ಶೋಧ ಕಾರ್ಯಾಚರಣೆಯಲ್ಲಿ ರಾತ್ರಿ ೮ ಗಂಟೆ ವೇಳೆ ಮೊಗ್ರಾಲ್ ಪುತ್ತೂರು ಸಿಪಿಸಿಆರ್ಐ ಬಳಿಯ ಕಲ್ಲಂಗೈ ಪಂಜಿಗುಡ್ಡೆ ಪಕ್ಕದ ಪೊದೆಯಲ್ಲಿ ರನೀಮ್ನ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಬಳಿಕ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಮರಣೋತ್ತರ ಪರೀಕ್ಷೆ ಬಳಿಕ ಮನೆಯವರಿಗೆ ಬಿಟ್ಟುಕೊಡಲಾಯಿತು. ಮೃತ ರನೀಮ್ ತಂದೆ ಹೊರತಾಗಿ ತಾಯಿ ಫಾತಿಮ, ಸಹೋದರಿ ರಿಮಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.
ಇದೇ ರೀತಿ ಇದೇ ರೈಲಿನಲ್ಲಿ ಪತ್ನಿ ಮತ್ತು ಪುತ್ರಿಯೊಂದಿಗೆ ಸಂಚರಿಸುತ್ತಿದ್ದ ಒಡಿಶಾದ ಸುಶಾಂತ್ ಸಾಹು ನಿನ್ನೆ ಮಧ್ಯಾಹ್ನ ಕಾಸರಗೋಡು ರೈಲು ನಿಲ್ದಾಣಕ್ಕೆ ತಲುಪಿದಾಗ ನೀರಿನ ಬಾಟಲಿ ಖರೀದಿಸಲೆಂದು ಕೆಳಗಿಳಿದ ಕೆಲವೇ ನಿಮಿಷದಲ್ಲಿ ರೈಲು ಪ್ರಯಾಣ ಮುಂದುವರಿಸಿತು. ಆಗ ಸುಶಾಂತ್ ಓಡಿ ಬಂದು ರೈಲಿಗೇರುವ ತವಕದಲ್ಲಿ ಕಾಲುಜಾರಿ ಪ್ಲಾಟ್ಫಾಂ ಮತ್ತು ಹಳಿ ಎಡೆಗೆ ಸಿಲುಕಿದ್ದಾರೆ. ಇದನ್ನು ಕಂಡ ಪ್ರಯಾಣಿಕರು ತಕ್ಷಣ ಚೈನ್ ಎಳೆದು ರೈಲು ನಿಲ್ಲಿಸಿದರು. ಆ ವೇಳೆ ಪ್ಲಾಟ್ಫಾಂ ಮತ್ತು ಹಳಿ ಎಡೆಯಲ್ಲಿ ಸುಶಾಂತ್ರ ದೇಹ ಛಿದ್ರಗೊಂಡು ಅಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದರು. ಪೊಲೀಸರು ಮತ್ತು ಆರ್ಪಿಎಫ್ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದರು.
ಮೃತರ ಜೇಬಿನಲ್ಲಿದ್ದ ಪಾನ್ ಕಾರ್ಡ್ ಸಹಾಯದಿಂದ ಪೊಲೀಸರಿಗೆ ಅವರ ಗುರುತು ಹಚ್ಚಲು ಸಾಧ್ಯವಾಯಿತು. ಮೃತ ಸುಶಾಂತ್ ಮಂಗಳೂರಿನ ಪೆಟ್ರೋಲ್ ಬಂಕೊಂದರಲ್ಲಿ ಕಾರ್ಮಿಕರಾಗಿದ್ದರು. ಈ ಎರಡೂ ಘಟನೆಗಳ ಬಗ್ಗೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.