ಕಾಸರಗೋಡಿನಲ್ಲಿ ತಲೆ ಮರೆಸಿಕೊಂಡು ಜೀವಿಸುತ್ತಿದ್ದ ಗೂಂಡಾ ಯಾದಿಯಲ್ಲಿ ಒಳಪಟ್ಟ ಯುವಕ ಸೆರೆ
ಕಾಸರಗೋಡು: ಕೊಲೆಯತ್ನ, ಕಳವು ಇತ್ಯಾದಿ 20ರಷ್ಟು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಬಳಿಕ ಕಾಸರಗೋಡಿನಲ್ಲಿ ತಲೆಮರೆಸಿ ಕೊಂಡು ಜೀವಿಸುತ್ತಿದ್ದ ಯುವಕನನ್ನು ಕಾಸರಗೋಡು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಾಜಿ ಪಟ್ಟೇರಿಯವರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ತೃಶೂರು ಚೇಲಕ್ಕೆರೆ ಪತ್ತುಕ್ಕುಡಿ ಪುದುವೀಟಿಲ್ ರಹೀಂ ಅಲಿಯಾಸ್ ಅಬ್ದುಲ್ ರಹೀಂ ಅಲಿಯಾಸ್ ಪೋತ್ತು ರಹೀಂ (32) ಬಂಧಿತನಾದ ಯುವಕ.
ಕುನ್ನಂಕುಳಂ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಓರ್ವನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್ ರಹೀಂ ಅಲ್ಲಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು.
ಅಲ್ಲಿಂದ ಆತ ಮೊದಲು ಕಾಲಡಿಗೆ ಹೋಗಿ ಅಲ್ಲಿ ಕೆಲಸಕ್ಕೆ ಸೇರಿದ್ದನು. ನಂತರ ಒಂದು ತಿಂಗಳ ಹಿಂದೆ ಕಾಸರಗೋಡಿಗೆ ಆಗಮಿಸಿ ಆತ ನಗರದ ಬಾರ್ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದನು. ಆ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದನ್ವಯ ಆತನನ್ನು ಸೆರೆ ಹಿಡಿಯಲಾಯಿತೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾಸರಗೋಡು ಪೊಲೀಸರು ಕುನ್ನಂಕುಳಂ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಅದರಂತೆ ಅಲ್ಲಿನ ಪೊಲೀಸರು ಕಾಸರಗೋಡಿಗೆ ಆಗಮಿಸಿ ಆರೋಪಿಯನ್ನು ಕುನ್ನಂಕುಳಂಗೆ ಸಾಗಿಸುವ ಅಗತ್ಯದ ಕ್ರಮ ಆರಂಭಿಸಿದ್ದಾರೆ. ಬಂಧಿತನು ಗೂಂಡಾ ಯಾದಿಗೆ ಒಳಪಟ್ಟಿರುವ ವ್ಯಕ್ತಿಯೂ ಆಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈತನನ್ನು ಸೆರೆ ಹಿಡಿದ ಪೊಲೀಸರ ತಂಡದಲ್ಲಿ ಎಸ್‌ಐ ಸಜಿ ಮೋನ್ ಜೋರ್ಜ್, ಪೊಲೀಸರಾದ ಫಿಲಿಪ್ ಥೋಮಸ್, ಕೆ. ಸಂತೋಷ್, ಎಂ.ವಿ. ಕೃಪೇಶ್ ಎಂಬಿವರು ಒಳಗೊಂಡಿದ್ದಾರೆ.