ಕಾಸರಗೋಡು ಜಿಲ್ಲೆ ಪ್ರವಾಹ ಭೀತಿಯಲ್ಲಿತಗ್ಗು ಪ್ರದೇಶಗಳು ಜಲಾವೃತ: ವ್ಯಾಪಕ ನಾಶ
ಕಾಸರಗೋಡು: ಧಾರಾಕಾರ ಮಳೆಯಿಂದಾಗಿ ಕಾಸರಗೋಡು ಜಿಲ್ಲೆ ಪ್ರವಾಹ ಭೀತಿಯನ್ನು ಎದುರಿಸುತ್ತಿದೆ. ಜಿಲ್ಲೆಯ ತಗ್ಗು ಪ್ರದೇಶಗಳು ನೀರಿನಿಂದ ಆವೃತಗೊಂಡಿದೆ. ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಕಡಲ್ಕೊರೆತ ಉಂಟಾಗಿದೆ. ಇದರಿಂದ ಕರಾವಳಿ ಪ್ರದೇಶದ ಜನರು ಆತಂಕದಲ್ಲಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ಪೆರಿಂಗಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಮುಟ್ಟಂಗೇಟ್‌ನಿಂದ ಪೆರಿಂಗಡಿಗೆ ತೆರಳುವ ಬೀಚ್ ರಸ್ತೆ ಕಡಲ್ಕೊರೆತದಿಂದ ನಾಶಗೊಂಡಿದೆ. ಈ ಪ್ರದೇಶದಲ್ಲಿ ಹೈ ಟೆನ್ಶನ್ ವಿದ್ಯುತ್ ಕಂಬಗಳು ಯಾವುದೇ ಸಮಯದಲ್ಲಿ ಸಮುದ್ರ ಪಾಲಾಗುವ ಸ್ಥಿತಿಯಿದೆ. ಕಡಪ್ಪುರದಲ್ಲಿರುವ ೫೦ರಷ್ಟು ಕುಟುಂಬಗಳು ಆತಂಕದಲ್ಲಿವೆ. ಸಮುದ್ರ ಕಿನಾರೆಯಲ್ಲಿದ್ದ 100ರಷ್ಟು ಗಾಳಿ ಮರಗಳು ಸಮುದ್ರ ಪಾಲಾಗಿವೆ. ಹನುಮಾನ್ ನಗರದಲ್ಲಿ ರಸ್ತೆಗಳು ಹಾನಿಗೀಡಾಗಿವೆ. ವರ್ಕಾಡಿ ದೈಗೋಳಿಯಲ್ಲಿ ಗುಡ್ಡೆ ಕುಸಿದು ಮರಗಳು ರಸ್ತೆಗೆ ಬಿದ್ದಿವೆ. ನಿನ್ನೆ ರಾತ್ರಿ ಇಲ್ಲಿ ಮಣ್ಣು ರಸ್ತೆಗೆ ಬಿದ್ದಿದ್ದು ವಿಷಯ ತಿಳಿದು ಉಪ್ಪಳ ಅಗ್ನಿಶಾಮಕದಳ ತಲುಪಿ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಏರ್ಪಡಿಸಿದೆ. ಹೊಸಂಗಡಿಯ ಹಲವೆಡೆ ನೀರು ನುಗ್ಗಿದೆ. ತೆಕ್ಕಿಲ್ ಹೊಳೆಯಲ್ಲಿ ಜಲಮಟ್ಟ ಏರತೊಡಗಿದೆ. ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಈ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚು ಕಾಣಿಸಿದೆ. ಕಾಸರಗೋಡು-ಕಾಞಂಗಾಡ್ ಕೆಎಸ್‌ಟಿಪಿ ರಸ್ತೆಯಲ್ಲಿ ನೀರು ತುಂಬಿಕೊಂಡಿರುವುದರಿಂದ ಸಣ್ಣ ವಾಹನಗಳು ವ್ಯಾಪಕ ಅಪಘಾತಕ್ಕೀಡಾಗುತ್ತಿವೆ. ಇದರಿಂದ ಪ್ರಯಾಣಿಕರು ಗಾಯಗೊಂಡ ಘಟನೆಯೂ ಸಂಭವಿಸಿದೆ.
ಬೇಕಲ ಮಾಸ್ತಿಗುಡ ರೈಲ್ವೇ ಗೇಟ್‌ನಲ್ಲಿ ನೀರು ತುಂಬಿಕೊಂಡಿದೆ.
ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ ಬೆಳಿಗ್ಗೆ 8.30ರಿಂದ ರಾತ್ರಿ 7.15ರ ತನಕ ೮೫ ಮಿಲ್ಲಿ ಮೀಟರ್ ಮಳೆ ಸುರಿದಿದೆ. ಧಾರಾಕಾರ ಮಳೆ ಜುಲೈ 20ರ ತನಕ ಮುಂದುವರಿಯುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಉತ್ತರ ಕೇರಳದ ಜಿಲ್ಲೆಗಳಲ್ಲಿ ಗಂಟೆಗೆ ೪೦ರಿಂದ ೫೦ ಕಿ.ಮೀ ತನಕ ಬಿರುಗಾಳಿ ಬೀಸುವಸಾಧ್ಯತೆ ಇದೆಯೆಂದು ಮುನ್ನೆಚ್ಚರಿಕೆ ನೀಡಲಾಗಿದೆ. ಇದೇ ವೇಳೆ ನದಿಗಳಲ್ಲಿ ನೀರಿನ ಮಟ್ಟ ಏರಿರುವುದರಿಂದಾಗಿ ಯಾರೂ ನದಿಗೆ ಇಳಿಯಬಾರದೆಂಬ ಮುನ್ನೆಚ್ಚರಿಕೆಯನ್ನು ರಾಜ್ಯ ನೀರಾವರಿ ಇಲಾಖೆ ನೀಡಿದೆ.