ಕಾಸರಗೋಡು ನಗರದಲ್ಲಿ ಆಸ್ಪತ್ರೆ ನೌಕರನಿಗೆ ಇರಿತ : ಸ್ಕೂಟರ್‌ನಲ್ಲಿ ಪರಾರಿಯಾದ ಆರೋಪಿಗಾಗಿ ಶೋಧ
ಕಾಸರಗೋಡು: ಕಾಸರಗೋಡು ನಗರ ಮಧ್ಯೆಯಿರುವ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ನುಗ್ಗಿ ನೌಕರನಿಗೆ ಇರಿದು ಗಾಯಗೊಳಿಸಿದ ಬಳಿಕ ದುಷ್ಕರ್ಮಿ ಸ್ಕೂಟರ್‌ನಲ್ಲಿ ಪರಾರಿಯಾಗಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಆರೋಪಿಯನ್ನು ಪತ್ತೆಹಚ್ಚಲು ಸ್ಕೂಟರ್‌ನ ನಂಬ್ರವನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿನ್ನೆ ಸಂಜೆ ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಆಸ್ಪತ್ರೆಯ ರೇಡಿಯೋಲಜಿ ವಿಭಾಗದ ನೌಕರನಾದ ಉಳಿಯತ್ತಡ್ಕ ನಿವಾಸಿ ಅಬ್ದುಲ್ ರಜಾಕ್ (38)ರಿಗೆ ಇರಿದು ಗಾಯಗೊಳಿಸಲಾಗಿದೆ. ಇವರು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಆಸ್ಪತ್ರೆಗೆ ತಲುಪಿದ ದುಷ್ಕರ್ಮಿ ಅಬ್ದುಲ್ ರಜಾಕ್‌ರೊಂದಿಗೆ ಮಾತನಾಡಿದ್ದು, ಬಳಿಕ ಕಾರ್ ಪಾರ್ಕಿಂಗ್ ಸ್ಥಳಕ್ಕೆ ತಲುಪಿದಾಗ ರೋಷಗೊಂಡು ಕೈಯಲ್ಲಿ ಬಚ್ಚಿಟ್ಟುಕೊಂಡಿದ್ದ ಚಾಕುವಿನಿಂದ ಇರಿದು ಗಾಯಗೊಳಿಸಿರುವುದು ಸಿಸಿ ಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ದಾಳಿ ವೇಳೆ ಅಬ್ದುಲ್ ರಜಾಕ್ ನೆಲಕ್ಕೆ ಬಿದ್ದಿದ್ದು ಅಪಾಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದುದರಿಂದ ಹೊಟ್ಟೆಗೆ ಇರಿತ ಉಂಟಾಗದೆ ಅಪಾಯದಿಂದ ಪಾರಾಗಿದ್ದಾರೆ. ತೊಡೆ ಹಾಗೂ ಕಾಲಿಗೆ ಇರಿತದ ಗಾಯಗಳಾಗಿವೆ. ಜನರು ಅಲ್ಲಿಗೆ ತಲುಪುವಷ್ಟರಲ್ಲಿ ಆರೋಪಿ ಆಸ್ಪತ್ರೆಯಿಂದ ಹೊರಗೆ ಓಡಿ ಅಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನಲ್ಲಿ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಆಸ್ಪತ್ರೆ ಹಾಗೂ ಸಮೀಪದ ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಮಹಿಳೆಗೆ ಸಂಬಂಧಪಟ್ಟ ವಿಷಯವೇ ದಾಳಿಗೆ ಕಾರಣವಾಗಿದೆಯೆಂದು ಕಾಸರಗೋಡು ನಗರಠಾಣೆ ಪೊಲೀಸರು ದಾಖಲಿಸಿಕೊಂಡ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ