ಕಾಸರಗೋಡು ರೈಲು ನಿಲ್ದಾಣದಲ್ಲಿ ನಾಪತ್ತೆಯಾದ ಕನ್ನಡ ನಾಮಫಲಕಗಳು
ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣದಲ್ಲಿ ಕನ್ನಡವನ್ನು ಪೂರ್ಣವಾಗಿ ಹೊರತುಪಡಿಸಿರುವು ದಾಗಿ ಆರೋಪವುಂಟಾಗಿದೆ. ರೈಲು ನಿಲ್ದಾಣದ ವಿವಿಧೆಡೆ ಸ್ಥಾಪಿಸಲಾದ ಸ್ಥಳ ನಾಮಫಲಕಗಳು ಇಂಗ್ಲಿಷ್, ಹಿಂದಿ ಹಾಗೂ ಮಲೆಯಾಳ ಭಾಷೆಗಳಲ್ಲಿವೆ. ಆದರೆ ಬಹುತೇಕ ಮಂದಿ ಕನ್ನಡಿಗರು ಇರುವ ಇಲ್ಲಿನ ನಾಮಫಲಕಗಳಲ್ಲಿ ಕನ್ನಡವನ್ನು ಹೊರತುಪಡಿಸಿರುವುದು ವ್ಯಾಪಕ ಆರೋಪಕ್ಕೆಡೆಯಾಗಿದೆ.
ರೈಲ್ವೇ ಫ್ಲಾಟ್‌ಫಾಂನ ವಿವಿಧೆಡೆ ಹಲವು ನಾಮಫಲಕಗಳಿವೆ. ಅವುಗಳಲ್ಲಿ ಎಲ್ಲಿಯೂ ಕನ್ನಡವನ್ನು ಬಳಸಲಿಲ್ಲ. ಪ್ರತಿದಿನ ಸಾವಿರಾರು ಮಂದಿ ಪ್ರಯಾಣಕ್ಕಾಗಿ ತಲುಪುವ ರೈಲು ನಿಲ್ದಾಣದಲ್ಲಿ ಕನ್ನಡವನ್ನು ಮಾತ್ರ ಹೊರತುಪಡಿಸಲಾಗಿದೆ. ಇದರಿಂದ ಕನ್ನಡ ಮಾತ್ರ ಓದಲು ತಿಳಿದಿರುವ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಕೆಲವು ವರ್ಷಗಳ ಹಿಂದೆ ಇಲ್ಲಿ ಕನ್ನಡದಲ್ಲೂ ನಾಮಫಲಕಗಳಿತ್ತು. ಆದರೆ ಇದೀಗ ಕನ್ನಡ ನಾಮಫಲಕಗಳು ಎಲ್ಲೂ ಕಾಣಿಸುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಕಾಸರಗೋಡಿನ ಇತರೆಡೆಗಳಲ್ಲೂ ಇದೇ ರೀತಿಯಲ್ಲಿ ಕನ್ನಡವನ್ನು ಇಲ್ಲದಾಗಿಸುವ ಪ್ರಯತ್ನ ನಡೆಯಲಿದೆ. ಆದ್ದರಿಂದ ಕಾಸರಗೋ ಡು ರೈಲು ನಿಲ್ದಾಣದಲ್ಲಿ ಕನ್ನಡದಲ್ಲೂ ನಾಮಫಲಕ ಸ್ಥಾಪಿಸಬೇಕು. ಈ ವಿಷಯದಲ್ಲಿ ಕನ್ನಡ ಸಂಘಟನೆಗಳು ಹೆಚ್ಚಿನ ಆಸಕ್ತಿ ವಹಿಸಬೇಕೆಂಬ ಬೇಡಿಕೆ ಸಾರ್ವಜನಿಕರ ಭಾಗದಿಂದ ಕೇಳಿ ಬಂದಿದೆ.