ಕುಂಜತ್ತೂರು ಬಳಿ ಆಟೋ ಚಾಲಕನ ಸಾವು ಕೊಲೆಯೆಂದು ಸಾಬೀತು
ಮಂಜೇಶ್ವರ: ಕುಂಜತ್ತೂರು ಬಳಿಯ ಅಡ್ಕಪ್ಪಳ್ಳ ಮಾನಿಗುಡ್ಡೆ ಎಂಬಲ್ಲಿನ ಆವರಣಗೋಡೆಯಿಲ್ಲದ ಬಾವಿಯಲ್ಲಿ ಮಂಗಳೂರಿನ ಆಟೋ ಚಾಲಕ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಲೆಕೃತ್ಯವಾಗಿ ದೆಯೆಂದು ದೃಢೀಕರಿಸಲಾಗಿದೆ. ಕುತ್ತಿಗೆ ಹಾಗೂ ತಲೆಯ ಹಿಂಭಾಗದಲ್ಲಿ ಉಂಟಾದ ಇರಿತದ ಗಾಯವೇ ಸಾವಿಗೆ ಕಾರಣವೆಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿದುಬಂದಿದೆ.
ಮಂಗಳೂರು ಬಳಿಯ ಮುಲ್ಕಿ ಕೊಲ್ನಾಡು ನಿವಾಸಿಯೂ, ಮಂಗಳೂ ರಿನಲ್ಲಿ ಆಟೋ ಚಾಲಕನಾಗಿದ್ದ ಮೊಹ ಮ್ಮದ್ ಶರೀಫ್ (52) ಎಂಬವರು ಮೊನ್ನೆ ಸಂಜೆ ಮಾನಿಗುಡ್ಡೆಯ ನಿರ್ಜನ ಹಿತ್ತಿಲಲ್ಲಿರುವ ಬಾವಿಯಲ್ಲಿ ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಬಾವಿಯ ಸಮೀಪ ಕರ್ನಾಟಕ ನೋಂದಾಯಿತ ಆಟೋ ರಿಕ್ಷಾ ಹೊಂಡದಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ನಡೆಸಿದ ಶೋಧ ವೇಳೆ ಬಾವಿಯಲ್ಲಿ ಮೃತದೇಹ ಕಂಡುಬಂದಿದೆ. ಬಾವಿಯ ಬಳಿ ರಕ್ತ ಮಿಶ್ರಿತ ಬಟ್ಟೆಗಳು, ಚಪ್ಪಲಿ, ಪರ್ಸ್ ಪತ್ತೆಯಾಗಿತ್ತು. ನಾಗರಿಕರು ನೀಡಿದ ಮಾಹಿತಿಯಂತೆ ಪೊಲೀಸರು ತಲುಪಿ ಪರ್ಸ್ ತೆರೆದು ನೋಡಿದಾಗ ಮೃತಪಟ್ಟ ವ್ಯಕ್ತಿಯ ಭಾವಚಿತ್ರ ಹಾಗೂ ದಾಖಲೆಪತ್ರಗಳು ಕಂಡುಬಂದಿವೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಮೊಹಮ್ಮದ್ ಶರೀಫ್ ನಾಪತ್ತೆಯಾದ ಬಗ್ಗೆ ಕೇಸು ದಾಖಲಾಗಿರುವ ವಿಷಯ ತಿಳಿದುಬಂದಿದೆ. ವಿಷಯ ತಿಳಿದು ಸಂಬಂಧಿಕರು ತಲುಪಿ ಆಟೋ ರಿಕ್ಷಾ ನಾಪತ್ತೆಯಾದ ವ್ಯಕ್ತಿಯದ್ದೆಂದು ದೃಢೀಕರಿಸಿದ್ದಾರೆ.
ನಿನ್ನೆ ಬೆಳಿಗ್ಗೆ ಬಾವಿಯಿಂದ ಮೇಲಕ್ಕೆತ್ತಿದ ಮೃತದೇಹದಲ್ಲಿ ಇರಿತದಿಂದ ಉಂಟಾದ ಗಾಯಗಳು ಕಂಡುಬಂದಿತ್ತು. ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಇದೇ ವೇಳೆ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್ ನೇತೃತ್ವದಲ್ಲಿ ತನಿಖೆ ತೀವ್ರ ಗೊಳಿಸಲಾಗಿದೆ. ಹಲವರನ್ನು ವಿಚಾರಣೆಗೊಳಪಡಿಸಿದರೂ ಆರೋಪಿಗಳ ಕುರಿತು ಯಾವುದೇ ಸೂಚನೆ ಲಭಿಸಿಲ್ಲ. ಬುಧವಾರ ರಾತ್ರಿ ಮಂಗಳೂರಿನಿಂದ ಮೂರು ಮಂದಿ ಮೊಹಮ್ಮದ್ ಶರೀಫ್‌ರ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅವರನ್ನು ಪತ್ತೆಹಚ್ಚಲಿರುವ ಪ್ರಯತ್ನ ಆರಂಭಿಸಲಾಗಿದೆ. ಇದರ ಅಂಗವಾಗಿ ಮಂಗಳೂರಿನಿಂದ ಮಂಜೇಶ್ವರ ವರೆಗೆ ರಸ್ತೆ ಬದಿ ಸ್ಥಾಪಿಸಿರುವ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ಸ್ಥಳದ ಕುರಿತು ಅರಿವು ಇದ್ದವರೇ ಈ ಕೊಲೆ ಕೃತ್ಯದ ಹಿಂದಿರಬಹುದೆಂದು ಸಂಶಯ ಮೂಡಿಸಿದೆ. ಕೊಲೆ ಪ್ರಕರಣದ ಕುರಿತು ಕರ್ನಾಟಕ ಪೊಲೀಸರು ಕೂಡಾ ತನಿಖೆ ಆರಂಭಿಸಿದ್ದಾರೆ.