ಕುಂಬಳೆಯಲ್ಲಿ ಪದೇ ಪದೇ ಕಳ್ಳತನದಿಂದ ಕಂಗೆಟ್ಟ ಜನತೆ: ಆರಿಕ್ಕಾಡಿಯ ಗಲ್ಫ್ ಉದ್ಯೋಗಿ ಮನೆಯಿಂದ ಕಳವು: 9 ಬೆರಳಚ್ಚು ಪತ್ತೆ
ಕುಂಬಳೆ: ಕುಂಬಳೆಯಲ್ಲಿ ಮತ್ತೊಂದು ಮನೆಗೆ ನುಗ್ಗಿದ ಕಳ್ಳರು ಹಣ ಹಾಗೂ ಚಿನ್ನಾಭರಣ ದೋಚಿದ್ದು ಈ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿ ದ್ದಾರೆ. ಆರಿಕ್ಕಾಡಿ ನಿವಾಸಿಯೂ, ಗಲ್ಫ್ ಉದ್ಯೋಗಿಯಾಗಿರುವ ಸಿದ್ಧ್ದಿಖ್ ಎಂಬವರ ಮನೆಯಿಂದ ಮೊನ್ನೆ ರಾತ್ರಿ ಐದು ಪವನ್ ಚಿನ್ನಾಭರಣ ಹಾಗೂ 10,000 ರೂಪಾಯಿಗಳನ್ನು ಕಳ್ಳರು ದೋಚಿದ್ದಾರೆ. ಎರಡಂತಸ್ತಿನ ಈ ಮನೆಯಲ್ಲಿ ಸಿದ್ಧಿಕ್‌ರ ಪತ್ನಿ ನೂರಿ ಹಾಗೂ ಮೂವರು ಮಕ್ಕಳು ವಾಸಿಸುತ್ತಿದ್ದಾರೆ. ಮೊನ್ನೆ ರಾತ್ರಿ ಇವರು ಮನೆಗೆ ಬೀಗ ಜಡಿದು ಆರಿಕ್ಕಾಡಿಯ ಸಲಫಿ ಮಸೀದಿಗೆ ತೆರಳಿದ್ದರು. ನಿನ್ನೆ ಮುಂಜಾನೆ ೪ ಗಂಟೆಗೆ ಆಗಮಿಸಿದಾಗಲೇ ಮನೆಗೆ ಕಳ್ಳರು ನುಗ್ಗಿದ ವಿಷಯ ಅರಿವಿಗೆ ಬಂದಿದೆ. ಅಡುಗೆ ಕೋಣೆ ಭಾಗದ ಬಾಗಿಲು ಮುರಿದು ಮನೆಯ ಒಳನುಗ್ಗಿದ ಕಳ್ಳರು ಕೊಠಡಿಗಳಲ್ಲಿದ್ದ ಎರಡು ಕಪಾಟುಗಳನ್ನು ತೆರೆದು ನಗ-ನಗದು ದೋಚಿದ್ದಾರೆ. ವಿಷಯ ತಿಳಿದು ತಲುಪಿದ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಮನೆಗೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಮನೆಯಿಂದ ಒಂಭತ್ತು ಬೆರಳಚ್ಚುಗಳನ್ನು ಪತ್ತೆಹಚ್ಚಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಕುಂಬಳೆಯಲ್ಲಿ ಪದೇ ಪದೇ ಕಳವು ನಡೆಯುತ್ತಿರು ವುದು ಇಲ್ಲಿನ ಜನತೆಯಲ್ಲಿ ಆತಂಕ ಮೂಡಿಸಿದೆ.
ಇತ್ತೀಚೆಗೆ ಮಾರ್ಚ್೨೫ರಂದು ಶಾಂತಿಪಳ್ಳ ನಿವಾಸಿಯಾದ ಗಲ್ಫ್ ಉದ್ಯೋಗಿ ಸುಬೈರ್‌ರ ಮನೆಯಿಂದ 23 ಪವನ್ ಚಿನ್ನವನ್ನು ಹಾಗೂ 400 ದಿರ್ಹಾಂ ಕಳವಿಗೀಡಾಗಿತ್ತು. ಅದರ ಮರುದಿನ ಕೃಷ್ಣನಗರ ನಿವಾಸಿಯೂ ಕುಂಬಳೆ ಪೇಟೆಯ ಬದಿಯಡ್ಕ ರಸ್ತೆಯಲ್ಲಿ ಗೂಡಂಗಡಿ ನಡೆಸುವ ವಸಂತ ಕುಮಾರ್‌ರ ಮನೆಯಿಂದ ಕಳವು ಯತ್ನ ನಡೆದಿತ್ತು. ಮನೆಯೊಳಗೆ ಸದ್ದು ಕೇಳಿ ಮನೆ ಯವರು ಎಚ್ಚೆತ್ತಾಗ ಅವರನ್ನು ದೂಡಿಹಾಕಿ ಕಳ್ಳರು ಪರಾರಿಯಾಗಿದ್ದರು. ಅನಂತರ ಈ ತಿಂಗಳ ೧ರಂದು ರಾತ್ರಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯ ವೈದ್ಯ ಸಂದೀಪ್ ಎಂಬವರ ಮನೆಗೂ ಕಳ್ಳರು ನುಗ್ಗಿದ್ದು, ಆದರೆ ಮನೆಯವರು ಎಚ್ಚೆತ್ತಾಗ ಅಲ್ಲಿಂದಲೂ ಕಳ್ಳರು ಓಡಿ ಪರಾರಿಯಾಗಿದ್ದಾರೆ. ಈ ರೀತಿ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳೊಳಗೆ ಕಳವು ಹಾಗೂ ಕಳವು ಯತ್ನ ಸೇರಿ ಸುಮಾರು ಹದಿನಾಲ್ಕು ಪ್ರಕರಣಗಳು ನಡೆದಿವೆ. ಆದರೆ ಈ ಯಾವುದೇ ಪ್ರಕರಣದಲ್ಲೂ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗದಿರುವುದು ಪೊಲೀಸರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಮಾತ್ರವಲ್ಲ ಕಳ್ಳರ ಹಾವಳಿಯಿಂದಾಗಿ ಜನತೆ ತೀವ್ರ ಆತಂಕಕ್ಕೀಡಾಗಿದ್ದಾರೆ.