ಕುಂಬಳೆಯಲ್ಲಿ ವ್ಯಾಪಾರಿ ಕಟ್ಟಡದ ಮೇಲೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಕುಂಬಳೆಯಲ್ಲಿ ಯುವ ವ್ಯಾಪಾರಿಯೊಬ್ಬರು ಕಟ್ಟಡದ ಮೇಲೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ  ಪತ್ತೆಯಾದ ಘಟನೆ ನಡೆದಿದೆ.

ಕುಂಬಳೆ ಪೆರುವಾಡ್‌ನ ಕೃಷ್ಣ-ಪ್ರೇಮಾವತಿ ದಂಪತಿಯ ಪುತ್ರ ಸಂತೋಷ್ ಯಾನೆ ಸಂತು (40) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬದರ್ ಜುಮಾ ಮಸೀದಿಯ ಮುಂಭಾಗದಲ್ಲಿ ಹಣ್ಣು ಹಂಪಲು, ತರಕಾರಿ ವ್ಯಾಪಾರಿಯಾಗಿದ್ದರು. ಮರ್ಚೆಂಟ್ಸ್ ಯೂತ್ ವಿಂಗ್ ಕುಂಬಳೆ ಯೂನಿಟ್ ಕೋಶಾಧಿಕಾರಿಯೂ ಆಗಿದ್ದರು. ನಿನ್ನೆ ಮಧ್ಯಾಹ್ನ ವೇಳೆ ಇವರು ಕುಂಬಳೆ ಪೇಟೆಯ ಅರಿಮಲ ಕಾಂಪ್ಲೆಕ್ಸ್‌ನ ಮೇಲೆ ಶೀಟ್ ಅಳವಡಿಸಿದ ಛಾವಣಿಯ ಸರಳಿಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಸ್ತುತ ಕಟ್ಟಡದ ಕೆಳಗಿನ ಅಂತಸ್ತಿನಲ್ಲಿರುವ ವ್ಯಾಪಾರಿಗಳ ಸಾಮಗ್ರಿಗಳನ್ನು ಇಲ್ಲಿರಿಸಲಾಗುತ್ತಿದೆ. ಸಾಮಗ್ರಿ ತೆಗೆಯಲು ತಲುಪಿದವರಿಗೆ ಸಂತೋಷ್ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿರುವುದನ್ನು ಕಂಡಿದ್ದಾರೆ. ಕೆಳಗಿನ ಅಂತಸ್ತಿನಿಂದ ಕೊಂಡೊಯ್ದು ಪ್ಲಾಸ್ಟಿಕ್ ಡ್ರಮ್‌ನ ಮೇಲೆ ಹತ್ತಿ ನಿಂತು ಕಬ್ಬಿಣದ ಸರಳಿಗೆ ಕುಣಿಕೆ ಹಾಕಿರುವುದಾಗಿ ಸಂಶಯಿಸಲಾಗುತ್ತಿದೆ.

ಕುಂಬಳೆ ಪೊಲೀಸರು ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಮೃತದೇಹವನ್ನು ಮನೆಗೆ ಕೊಂಡೊಯ್ದು  ವ್ಯಾಪಾರಿಗಳ ಸಹಿತ ಹಲವರು ತಲುಪಿ ಅಂತಿಮ ನಮನ ಸಲ್ಲಿಸಿದರು. ಅನಂತರ ಕುಂಟಂಗೇರಡ್ಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಮೃತರು ಪತ್ನಿ ಅನುಜ, ಇಬ್ಬರು ಮಕ್ಕಳು, ಸಹೋದರಿಯರಾದ ಮಮತಾ, ಲತಾ, ರತ್ನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page