ಕುಂಬಳೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾದ ಮೂವರು ಯುವಕರು ಮನೆ ಕಳವಿಗೆ ತಲುಪಿದವರು: ಬಂಧಿತರಿಗೆ ರಿಮಾಂಡ್
ಕುಂಬಳೆ: ಕುಂಬಳೆ ಸಿಎಚ್‌ಸಿ ರಸ್ತೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಮೂವರು ಯುವಕರು ಮನೆ ಕಳವು ನಡೆಸಲು ಬಂದವರೆಂದು ಪೊಲೀಸರು ತಿಳಿಸಿದ್ದಾರೆ. ಪೆರಿಯಡ್ಕದ ಅನ್ಸಾರ್ (26), ಮಧೂರು ಕೆಕೆಪುರದ ಬಿ. ಉಸ್ಮಾನ್ (28), ಉಳಿಯತ್ತಡ್ಕ ನೇಶನಲ್ ನಗರದ ಅಶ್ರಫ್ (28) ಎಂಬಿವರನ್ನು ನಾಗರಿಕರು ಶನಿವಾರ ಮುಂಜಾನೆ ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದರು. ಕುಂಬಳೆ ಸಿಎಚ್‌ಸಿ ರಸ್ತೆಯಲ್ಲಿ ಶನಿವಾರ ಮುಂಜಾನೆ ಈ ಮೂರು ಮಂದಿ ತಿರುಗಾಡುತ್ತಿದ್ದರು. ಅಲ್ಲಿನ ಕೆ.ಬಿ. ಅಬ್ಬಾಸ್ ಎಂಬವರ ಮನೆಯಿಂದ ಕಳವು ನಡೆಸಲು ಈ ತಂಡ ಅಲ್ಲಿಗೆ ತಲುಪಿತ್ತೆನ್ನಲಾಗಿದೆ. ಶಬ್ದಕೇಳಿ ಮನೆಯವರು ಎಚ್ಚೆತ್ತಾಗ ತಂಡ ಮನೆಯ ಕಾರು ಶೆಡ್‌ನಲ್ಲಿ ಅಡಗಿಕೊಂಡಿತ್ತು. ಇದೇ ಸಂದರ್ಭದಲ್ಲಿ ಕ್ರಿಕೆಟ್ ಆಟ ಮುಗಿದು ನಾಗರಿಕರಾದ ಯುವಕರು ಬಂದಿದ್ದು, ಈ ವೇಳೆ ಮನೆ ಕಳವಿಗೆ ಯತ್ನಿಸಿದ ತಂಡ ಪರಾರಿಯಾಗಲು ಯತ್ನಿಸಿತ್ತು. ಇದನ್ನು ಅರಿತ ಯುವಕರು ಅವರನ್ನು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಳಿಕ ಕುಂಬಳೆ ಎಸ್‌ಐ ವಿ.ಕೆ. ವಿಜಯನ್ ನೇತೃತ್ವದ ಪೊಲೀಸರು ಆರೋಪಿಗಳ ಬಂಧನ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಮನೆ ಕಳವಿಗಾಗಿ ತಲುಪಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಸೆರೆಗೀಡಾದ ಉಸ್ಮಾನ್ ವಿರುದ್ಧ ಹೊಡೆದಾಟ, ವಂಚನೆ ಸಹಿತ ಏಳು ಕೇಸುಗಳು ಪ್ರಸ್ತುತ ಇದೆಯೆಂದು ಪೊಲೀಸರು ತಿಳಿಸಿದ್ದಾರೆ. ಅನ್ಸಾರ್ ವಿರುದ್ಧ ನರಹತ್ಯಾಯತ್ನ, ನಕಲಿಚಿನ್ನ ಅಡವಿರಿಸಿ ವಂಚನೆ ಸಹಿತ ಆರರಷ್ಟು ಪ್ರಕರಣಗಳು ಹಾಗೂ ಅಶ್ರಫ್ ವಿರುದ್ಧ ಐದು ಕೇಸುಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಗಳನ್ನು ಕಾಸರಗೋಡು ನ್ಯಾಯಾ ಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ.