ಕುಂಬಳೆ ಅಂಡರ್ ಪ್ಯಾಸೇಜ್‌ನೊಳಗೆ ದ್ವಿಚಕ್ರ ವಾಹನಗಳ ನಿಲುಗಡೆ; ಮಾದಕವಸ್ತು ದಂಧೆಕೋರರ ಉಪಟಳ
ಕುಂಬಳೆ: ರೈಲಿನಿಂದಿಳಿದು ಕುಂಬಳೆ ಪೇಟೆಗೆ ತೆರಳಲು ಪಾದಚಾರಿಗಳಿಗೆ ಸೌಕರ್ಯ ವಾಗಲೆಂದು ನಿರ್ಮಿಸಿದ ಅಂಡರ್ ಪ್ಯಾಸೇಜ್‌ನೊಳಗೆ ಇದೀಗ ದ್ವಿಚಕ್ರವಾಹನಗಳೇ ತುಂಬಿ ಕೊಂಡಿದೆ. ಕುಂಬಳೆ ಬದರ್ ಜುಮಾ ಮಸೀದಿಯ ಮುಂಭಾಗ ದಲ್ಲಿರುವ ಅಂಡರ್ ಪ್ಯಾಸೇಜ್ ನೊಳಗೆ ಹಲವು ದ್ವಿಚಕ್ರ ವಾಹನ ಗಳನ್ನು ನಿಲ್ಲಿಸಿದ್ದು ಇದರಿಂದ ಪಾದಚಾರಿಗಳಿಗೆ ಸಮಸ್ಯೆಯಾಗಿ ಕಾಡಿದೆ. ಕಾಸರಗೋಡು ಹಾಗೂ ಮಂಗಳೂರು ಭಾಗದಿಂದ ಬರುವ ಪ್ರಯಾಣಿಕರು ಇದೇ ಅಂಡರ್ ಪ್ಯಾಸೇಜ್ ಮೂಲಕ ನಡೆದು ಕುಂಬಳೆ ಪೇಟೆಗೆ ತಲುಪಬೇಕಾಗಿದೆ. ಆದರೆ ಇದರೊಳಗೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದರಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲವೆಂಬ ದೂರು ಕೇಳಿ ಬಂದಿದೆ. ಮಾತ್ರವಲ್ಲದೆ ಸಂಜೆ ಬಳಿಕ ಈ ಅಂಡರ್‌ಪ್ಯಾಸೇಜ್‌ನೊಳಗೆ ಮದ್ಯ ಸಾಗಾಟ ದಂಧೆಯವರೇ ತುಂಬಿ ತಮ್ಮ ವ್ಯವಹಾರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದರಿಂದ ಇದರ ಮೂಲಕ ತೆರಳುವವರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಹಾಗೂ ಪ್ರಯಾಣಿಕರು ಒತ್ತಾಯಿಸಿದ್ದಾರೆ.