ಕುಂಬಳೆ, ಉಪ್ಪಳ, ಮಂಜೇಶ್ವರ ರೈಲ್ವೇ ನಿಲ್ದಾಣಗಳ ಅಭಿವೃದ್ಧಿಗೆ ಹಿಂಜರಿತ-ಆರೋಪ; ವಿದ್ಯಾರ್ಥಿಗಳು, ಯುವಜನ ಸಂಘಟನೆಗಳಿಂದ ಚಳವಳಿ ಮುನ್ನೆಚ್ಚರಿಕೆ

ಕುಂಬಳೆ: ಮಂಜೇಶ್ವರ ಮಂಡಲದ ಮೂರು ಪ್ರಧಾನ ರೈಲ್ವೇ ನಿಲ್ದಾಣಗಳಾದ ಕುಂಬಳೆ, ಉಪ್ಪಳ, ಮಂಜೇಶ್ವರವನ್ನು  ಹೊರತುಪಡಿಸಿ ಜಿಲ್ಲೆಯಲ್ಲಿ ಅಭಿವೃದ್ಧಿ ಚಟುವಟಿಕೆ ವಿರುದ್ಧ ಪ್ಯಾಸೆಂಜರ್ಸ್ ಅಸೋಸಿಯೇಶನ್, ವಿದ್ಯಾರ್ಥಿಗಳು ಹಾಗೂ ಯುವಜನ ಸಂಘಟನೆಗಳು ತೀವ್ರ ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿವೆ.

ಕಳೆದ ಹಲವು ವರ್ಷಗಳಿಂದ ಕುಂಬಳೆ, ಉಪ್ಪಳ, ಮಂಜೇಶ್ವರ ರೈಲ್ವೇ ನಿಲ್ದಾಣಗಳನ್ನು ಅವಗಣಿಸುವ ನಿಲುವನ್ನು ರೈಲ್ವೇ ಅನುಸರಿಸುತ್ತಿದೆ. ಇದರ ವಿರುದ್ಧ ಪ್ಯಾಸೆಂಜರ್ಸ್ ಅಸೋಸಿಯೇಶನ್ ಸಂಘಟನೆಗಳು ಹಾಗೂ ನಾಗರಿಕರು ಹಲವು ಬಾರಿ ಚಳವಳಿ ನಡೆಸಿದ್ದರು. ನಿರಂತರವಾಗಿ ಜನಪ್ರತಿನಿಧಿಗಳಿಗೆ ಹಾಗೂ ರೈಲ್ವೇ ಅಧಿ ಕಾರಿಗಳಿಗೆ ಮನವಿಗಳನ್ನು ಸಲ್ಲಿಸಲಾಗಿತ್ತು. ಆದರೂ ಈ ಮೂರು ರೈಲ್ವೇ ನಿಲ್ದಾಣಗಳನ್ನು ಕಡೆಗಣಿಸುವ ನಿಲುವನ್ನು ರೈಲ್ವೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೊಂದಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ ಸಂಸದ ರಾಜ್‌ಮೋಹನ್ ಈ ಮೂರು ರೈಲ್ವೇ ನಿಲ್ದಾಣಗಳಿಗೆ ಭೇಟಿ ನೀಡಿ ನಾಗರಿಕರಿಂದ ಹಾಗೂ ಸಂಘಟನೆಗಳಿಂದ ಅಹವಾಲುಗಳನ್ನು ಆಲಿಸಿ ಮನವಿಗಳನ್ನು ಪಡೆದುಕೊಂ ಡಿದ್ದರು. ಆದರೆ ಈ ಸಂದರ್ಶನ ರಾಜಕೀಯ ವಂಚನೆಯ ಭಾಗವಾಗಿದೆ ಎಂದು ಆರೋಪಿಸಿ ಎಸ್‌ಡಿಪಿಐ ಕಾರ್ಯಕರ್ತರು ಮಂಜೇಶ್ವರ ರೈಲು ನಿಲ್ದಾಣದಲ್ಲಿ ಸಂಸದರಿಗೆ ತಡೆಯೊಡ್ಡಿ ದ್ದರು.  ಆದರೂ ಅಭಿವೃದ್ಧಿ ಸಂಬಂಧಿಸಿ ಯಾವುದೇ ಪ್ರಯತ್ನ ನಡೆಸಲಿಲ್ಲ.

ಕುಂಬಳೆ ಹಾಗೂ ಮಂಜೇಶ್ವರ ರೈಲ್ವೇ ನಿಲ್ದಾಣಗಳು ರೈಲ್ವೇ ಅತೀ ಹೆಚ್ಚು ಆದಾಯ ದೊರಕಿಸಿಕೊಡುವ ನಿಲ್ದಾಣಗಳಾಗಿವೆ. ಆದರೆ ಅಭಿವೃದ್ಧಿ ವಿಷಯದಲ್ಲಿ ಭಾರೀ ಅವಗಣನೆ ತೋರಿಸಲಾಗುತ್ತಿದೆ. ಕುಂಬಳೆ ರೈಲ್ವೇ ನಿಲ್ದಾಣ ದಲ್ಲಿ ಅಭಿವೃದ್ಧಿಗೆ ಅಗತ್ಯವುಳ್ಳ ಹಲವು ಎಕರೆ ಸ್ಥಳವಿದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕುಂಬಳೆಯಲ್ಲಿ ಸ್ಯಾಟಲೈಟ್ ನಿಲ್ದಾಣವಾಗಿ ಭಡ್ತಿಗೊಳಿಸಬೇಕೆಂದು ನಾಗರಿಕರು ಆಗ್ರಹಪಡುತ್ತಿದ್ದಾರೆ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿ ಕಾಸರಗೋಡಿನಿಂದ ಆಚೆ ತೆಂಕಣ ಭಾಗದ ನಿಲ್ದಾಣಗಳನ್ನು ರೈಲ್ವೇ ಪರಿಗಣಿ ಸುತ್ತಿದೆ. ಇದರ ನೇತೃತ್ವ ವಹಿಸಲು ರಾಜಕೀಯ ಪಕ್ಷಗಳು, ಜನಪ್ರತಿನಿಧಿ ಗಳು ಸ್ಪರ್ಧಿಸುತ್ತಿದ್ದಾರೆ. ಇದೇ ರೀತಿ ಈ ಮೂರು ನಿಲ್ದಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ನೀತಿ ಅನುಸರಿ ಸಿದರೆ ತೀವ್ರ ಚಳವಳಿ ನಡೆಸುವುದಾಗಿ ಪ್ಯಾಸೆಂಜರ್ಸ್ ಅಸೋಸಿಯೇಶನ್, ವಿವಿಧ ಸಂಘಟನೆಗಳು ಹಾಗೂ ನಾಗರಿಕರು ತಿಳಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page