ಕುಂಬಳೆ: ರಸ್ತೆಯಲ್ಲೇ ಕಾಡು ಹಂದಿಗಳ ಅಲೆದಾಟ: ಜನತೆ ಆತಂಕದಲ್ಲಿ
ಕುಂಬಳೆ: ಅಲ್ಪ ಬಿಡುವಿನ ಬಳಿಕ ಕೊಡ್ಯಮ್ಮೆಯಲ್ಲಿ ಕಾಡುಹಂದಿಗಳು ನಾಡಿಗಿಳಿದಿರುವುದು ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ.
ಮೈಕೂಡಲ್ ರಸ್ತೆಯಲ್ಲಿ ಮರಿಗಳ ಸಹಿತ ಹಲವು ಕಾಡು ಹಂದಿಗಳು ಅಲೆ ದಾಡುತ್ತಿರುವುದು ಮೊನ್ನೆ ರಾತ್ರಿ ಕಾಣಿ ಸಿದೆ. ಈ ಪ್ರದೇಶದಲ್ಲಿ ಕಾಡು ಹಂದಿಗಳ ಹಾವಳಿ ವ್ಯಾಪಕಗೊಂಡಿರುವುದಾಗಿ ಈ ಹಿಂದೆಯೇ ವರದಿಯಾಗಿತ್ತು. ಹಂದಿಗಳು ರಸ್ತೆಯಲ್ಲೇ ನಡೆದಾಡುತ್ತಿರುವುದರಿಂದ ಪಾದಚಾರಿಗಳ ಹಾಗೂ ವಾಹನ ಪ್ರಯಾಣಿಕರಿಗೆ ಆತಂಕ ಹೆಚ್ಚಿಸಿದೆ. ಹಂದಿಗಳ ದಾಳಿಯಿಂದ ಈ ಹಿಂದೆ ಹಲವು ವಾಹನಗಳು ಅಪಘಾತಕ್ಕೀಡಾ ಗಿವೆ. ಮೂರು ತಿಂಗಳ ಹಿಂದೆ ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ಆಟೋ ರಿಕ್ಷಾ ಮಗುಚಿ ಬಿದ್ದು ಚಾಲಕ ಗಾಯಗೊಂಡಿದ್ದರು. ಹಾಡಹಗಲು ಕೂಡಾ ಕಾಡು ಹಂದಿಗಳು ಇಲ್ಲಿನ ರಸ್ತೆಗಳಲ್ಲಿ ಕಂಡು ಬರುತ್ತಿದ್ದು, ಇದರಿಂದ ಜನರಿಗೆ ನಡೆದಾಡಲು ಭಯ ಉಂಟಾಗಿದೆ. ಬಂಬ್ರಾಣ, ಆರಿಕ್ಕಾಡಿ, ಕಳತ್ತೂರು, ಪೂಕಟ್ಟೆ, ಇಚ್ಲಂಪಾಡಿ ಮೊದಲಾದೆಡೆಗಳಲ್ಲಿ ಹಲವು ಎಕ್ರೆ ಪ್ರದೇಶಗಳ ಕೃಷಿಯನ್ನು ಹಂದಿಗಳು ನಾಶಗೊಳಿಸಿವೆ. ಹಂದಿಗಳ ಉಪಟಳ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಶಾಸಕ ಎಕೆಎಂ. ಅಶ್ರಫ್ ವಿಧಾನ ಸಭೆಯಲ್ಲಿ ವಿಷಯ ಮಂಡಿಸಿದ್ದರು. ಇದಕ್ಕೆ ಉತ್ತರವಾಗಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಖಾತೆ ಸಚಿವ ತಿಳಿಸಿದ್ದರು. ಹಂದಿಗಳನ್ನು ಸೆರೆಹಿಡಿದು ಕಾಡಿಗೆ ಬಿಡುವುದಾಗಿಯೂ ಸಚಿವ ಭರವಸೆ ನೀಡಿದ್ದರು. ಆದರೆ ಅನಂತರ ಯಾವುದೇ ಕ್ರಮ ಸರಕಾರದ ಭಾಗದಿಂದ ಉಂಟಾಗಲಿಲ್ಲವೆಂದು ದೂರಲಾಗಿದೆ.