ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಧರ್ಮಸ್ಥಳ ದೇಗುಲ ಉಗ್ರರ ಟಾರ್ಗೆಟ್ ಆಗಿತ್ತು

ಬೆಂಗಳೂರು: 2022 ನವಂಬರ್ 19ರಂದು ಸಂಜೆ ಮಂಗಳೂರಿನ ಕಂಕನಾಡಿ ಬಳಿ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್  ಸ್ಫೋಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಲಭಿಸಿದೆ. ಕುಕ್ಕರ್ ಬಾಂಬ್‌ನ ಅಸಲಿ ಟಾರ್ಗೆಟ್ ಧರ್ಮಸ್ಥಳ ದೇಗುಲ ಆಗಿತ್ತೆಂಬ ಸ್ಫೋಟಕ ಮಾಹಿತಿ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಯಲ್ಲಿ ಬಯಲುಗೊಂಡಿದೆ. ಶಂಕಿತ ಉಗ್ರರು ಧರ್ಮಸ್ಥಳ ದೇವಾಲಯದಲ್ಲಿ ಬಾಂಬ್ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದರೆಂಬ ಮಾಹಿತಿಯನ್ನು ಇ.ಡಿ ಬಯಲಿಗೆಳೆದಿದೆ. ಈ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ಬಾಂಬನ್ನು ಧರ್ಮಸ್ಥಳ ಕ್ಷೇತ್ರದಲ್ಲಿ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದನು.  ಬಾಂಬ್ ಟೈಮರ್‌ನ್ನು ೯೦ ನಿಮಿಷಗಳ ಬದಲು ತಪ್ಪಿ 9 ಸೆಕೆಂಡ್‌ಗೆ ನಿಗದಿ ಮಾಡಿದ ಪರಿಣಾಮ ಅದು ಮಾರ್ಗದ ಮಧ್ಯೆ ಆಟೋ ರಿಕ್ಷಾದೊಳಗೆ ಸ್ಫೋಟಗೊಂಡಿತ್ತೆಂದು ಜಾರಿ ನಿರ್ದೇಶನಾಲಯ ಹೇಳಿದೆ.  ಆರೋಪಿ ಮೊಹಮ್ಮದ್ ಶಾರೀಕ್ ೨,೬೮,೦೦೦ ರೂ.ವನ್ನು ಕ್ರಿಸ್ಚೋ ಕರೆನ್ಸಿ ಏಜೆಂಟರ ಮೂಲಕ ಆರೋಪಿಗಳಿಗೆ ವರ್ಗಾವಣೆ ಮಾಡಿದ್ದನು. ಆ ಹಣದಿಂದ ಆರೋಪಿಗಳು ಆನ್‌ಲೈನ್‌ನಲ್ಲಿ ಐಇಡಿ ಬಾಂಬ್ ತಯಾರಿಗೆ ಬೇಕಾದ ಕಚ್ಛಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಕರ್ನಾಟಕ ಮಾತ್ರವಲ್ಲದೆ ಕೇರಳ ಮತ್ತು ತಮಿಳುನಾಡಿನಲ್ಲೂ ಐಇಡಿ ಬಾಂಬ್ ಸ್ಫೋಟ ನಡೆಸುವ ಸಂಚನ್ನು ಆರೋಪಿಗಳು ಹಾಕಿಕೊಂಡಿದ್ದ ರೆಂದೂ ತನಿಖೆಯಲ್ಲ್ಲಿ ಬೆಳಕಿಗೆ ಬಂದಿದೆಯೆಂದು ಇ.ಡಿ ಹೇಳಿದೆ.

You cannot copy contents of this page