ಕುಖ್ಯಾತ ಕಳವು ತಂಡ ಜಿಲ್ಲೆಗೆ ತಲುಪಿದ ವದಂತಿ ಬೆನ್ನಲ್ಲೇ ಕುಂಬಳೆಯಲ್ಲಿ ಬುರ್ಖಾಧಾರಿ ಯುವಕ ಕಸ್ಟಡಿಗೆ
ಕುಂಬಳೆ: ದಕ್ಷಿಣ ಕೇರಳದಲ್ಲಿ ಆತಂಕಮೂಡಿಸಿದ್ದ ಕುಖ್ಯಾತ ಕಳವು ತಂಡ ಕಾಸರಗೋಡು ಜಿಲ್ಲೆಗೂ ತಲುಪಿದೆ ಎಂದೂ ಈ ಹಿನ್ನೆಲೆಯಲ್ಲಿ ಜನರು ಜಾಗ್ರತೆ ಪಾಲಿಸಬೇಕೆಂದು ಪೊಲೀಸರು ಮುನೆಚ್ಚರಿಕೆ ನೀಡಿದ ಬೆನ್ನಲ್ಲೇ ಕುಂಬಳೆಯಲ್ಲಿ ಬುರ್ಖಾ ಧರಿಸಿದ್ದ ಯುವಕನನ್ನು ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ನಿನ್ನೆ ಮಧ್ಯಾಹ್ನ ವೇಳೆ ಕುಂಬಳೆ ಪೇಟೆಯಲ್ಲಿ ಬುರ್ಖಾ ಧರಿಸಿದ್ದ ಯುವಕ ಪತ್ತೆಯಾಗಿದ್ದಾನೆ. ಬಸ್ ಪ್ರಯಾಣಿಕರ ತಂಗುದಾಣದಲ್ಲಿದ್ದ ಮಹಿಳೆಯರ ಸಮೀಪದಲ್ಲಿ ಕುಳಿತು ಕೊಂಡಿದ್ದ ವ್ಯಕ್ತಿಯ ವರ್ತನೆಯಲ್ಲಿ ಸಂಶಯಗೊಂಡು ನಾಗರಿಕರು ಆತನನ್ನು ವಿಚಾರಿಸಿದ್ದಾರೆ. ಯುವಕನ ಕಾಲಿನ ಪಾದಗಳು ಗಂಡಸಿನದ್ದಾಗಿರುವುದು ಹಾಗೂ ಆತ ಗಂಡಸರ ಚಪ್ಪಲಿ ಧರಿಸಿರುವುದು ಸಂಶಯಕ್ಕೆಡೆಮಾಡಿತ್ತು. ಇದರಿಂದ ಆತನನ್ನು ವಿಚಾರಿಸತೊಡಗಿದಾಗ ಬುರ್ಖಾಧಾರಿ ಓಡಿ ಪಾರಾಗಲು ಯತ್ನಿಸಿದ್ದಾನೆ. ಕೂಡಲೇ ಆತನನ್ನು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಬುರ್ಖಾಧಾರಿ ವ್ಯಕ್ತಿ ಹಾಸನ ನಿವಾಸಿಯೆಂದು ತಿಳಿದಿದ್ದು, ಹಿಂದಿ ಮಾತನಾಡುತ್ತಿದ್ದನು. ಈತನ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಈತ ಕುಖ್ಯಾತ ಕಳವು ತಂಡ (ಕುರುವ ತಂಡ)ದ ಸದಸ್ಯನಾಗಿದ್ದಾನೆಯೇ ಎಂದು ತನಿಖೆ ನಡೆಯುತ್ತಿದೆಯೆಂದೂ ತಿಳಿಸಲಾಗಿದೆ.
ಹಗಲು ಹೊತ್ತಿನಲ್ಲಿ ವಿವಿಧೆಡೆ ಸುತ್ತಾಡಿ ಸ್ಥಿತಿಗತಿಗಳನ್ನು ತಿಳಿದುಕೊಂಡು ರಾತ್ರಿ ವೇಳೆ ಕಳವು ನಡೆಸುವುದು ‘ಕುರುವ’ ತಂಡದ ಕೃತ್ಯವಾಗಿದೆ. ಕಳವು ತಡೆಯಲೆತ್ನಿಸಿದರೆ ಆಕ್ರಮಣಕ್ಕೂ ಈ ತಂಡ ಮುಂದಾಗುತ್ತಿದೆ. ಇತ್ತೀಚೆಗೆ ಪಡನ್ನಕ್ಕಾಡ್‌ನ ಮನೆಯೊಂದರ ಸಿಸಿ ಟಿವಿಯಲ್ಲಿ ಸಂಶಯಿತ ಇಬ್ಬರು ವ್ಯಕ್ತಿಗಳ ಚಿತ್ರ ಸೆರೆಯಾಗಿತ್ತು. ಕುರುವ ತಂಡದ ಕುರಿತು ಭೀತಿ ಹುಟ್ಟಿಸುವ ವದಂತಿ ಪ್ರಚಾರವಾಗುತ್ತಿದ್ದಂತೆ ಈ ಇಬ್ಬರು ಸಂಶಯಿತ ವ್ಯಕ್ತಿಗಳು ಕಂಡುಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದನ್ನು ಗಂಭಿರವಾಗಿ ಪರಿಗಣಿಸಿದ ಪೊಲೀ ಸರು ಅಪರಿಚಿತರು ಕಂಡುಬಂದಲ್ಲಿ ಜಾಗ್ರತೆ ಪಾಲಿಸಬೇಕೆಂದೂ ತಿಳಿಸಿದ್ದಾರೆ.