ಕುಟುಂಬ ಹೊರಗೆ ತೆರಳಿದ ಸಂದರ್ಭದಲ್ಲಿ ಬೀಗ ಜಡಿದ ಮನೆಯಿಂದ ನಗ-ನಗದು ಕಳವು
ಉಪ್ಪಳ: ಮನೆಗೆ ಬೀಗ ಜಡಿದು ಕುಟುಂಬ ಹೊರಗೆ ತೆರಳಿದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ಹಣ ದೋಚಿ ಪರಾರಿಯಾದ ಘಟನೆ ನಡೆದಿದೆ. ಮಂಜೇಶ್ವರ ಹತ್ತನೇಮೈಲು ಚೆರಿಯಪಳ್ಳಿ ಎಂಬಲ್ಲಿನ ಪೊಡಿಯ ಅಕ್ಭರ್ ಎಂಬವರ ಮನೆಯಿಂದ ಆರೂವರೆ ಪವನ್ ಚಿನ್ನಾಭರಣ ಹಾಗೂ 35 ಸಾವಿರ ರೂಪಾಯಿ ಕಳವಿಗೀಡಾಗಿದೆ.
ಈ ತಿಂಗಳ 21ರಂದು ಬೆಳಿಗ್ಗೆ ಪೊಡಿಯ ಅಕ್ಬರ್‌ರ ಅಳಿಯನನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿಸಲು ಕುಟುಂಬ ಮನೆಗೆ ಬೀಗ ಜಡಿದು ತೆರಳಿತ್ತು. ಬಳಿಕ ಅವರು ಮಂಜೇಶ್ವರ ಕುನ್ನಿಲ್‌ನಲ್ಲಿರುವ ಪೊಡಿ ಅಕ್ಬರ್‌ರ ಮಗಳ ಮನೆಗೆ ತಲುಪಿದ್ದರು. ನಿನ್ನೆ ಸಂಜೆ ಮನೆಗೆ ಮರಳಿ ಬಂದಾಗ ಮನೆಯ ಬಾಗಿಲು ಮುರಿದಿರುವುದು ಕಂಡುಬಂದಿದೆ. ಇದರಿಂದ ಮನೆಯೊಳಗೆ ಪ್ರವೇಶಿಸಿ ಪರಿಶೀಲಿಸಿದಾಗ ಹಣ ಹಾಗೂ ಚಿನ್ನಾಭರಣ ಕಳವಿಗೀಡಾದ ವಿಷಯ ತಿಳಿದುಬಂದಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಮಂಜೇಶ್ವರ ಪೊಲೀಸರು ನಿನ್ನೆ ಮನೆಗೆ ತಲುಪಿ ತಪಾಸಣೆ ನಡೆಸಿದ್ದಾರೆ. ಇಂದು ಬೆರಳಚ್ಚು ತಜ್ಞರು ತಲುಪಿ ಪರಿಶೀಲನೆ ನಡೆಸಲಿದ್ದಾರೆಂದು ತಿಳಿದುಬಂದಿದೆ.