ಕುಸಿದ ಉರ್ಮಿ ಸೇತುವೆ ದುರಸ್ತಿಗೆ ಕ್ರಮವಿಲ್ಲ: ಸ್ಥಳೀಯರಿಗೆ ಸಂಚಾರ ಸಂಕಷ್ಟ
ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಲಾಲ್‌ಬಾಗ್-ಕೊಮ್ಮಂಗಳ ರಸ್ತೆಯ ಉರ್ಮಿ ಎಂಬಲ್ಲಿ ಸೇತುವೆ ಒಂದು ತುದಿಯ ಅಡಿಭಾಗದ ಕಂಬ ಕುಸಿದು ಬಿದ್ದು ಹಲವು ದಿನಗಳು ಕಳೆದರೂ ದುರಸ್ತಿ ನಡೆಸದಿರುವುದು ಸ್ಥಳೀಯರಿಗೆ ಸಂಕಷ್ಟ ತಂದಿತ್ತಿದೆ. ಕೊಮ್ಮಂಗಳ, ಬದಿಯಾರ್, ಪಳ್ಳೆಕೂಡೇಲ್ ಮೊದಲಾದ ಪ್ರದೇಶಗಳ ಜನರು ದಿನನಿತ್ಯ ಸಂಚರಿಸುತ್ತಿದ್ದ ಸೇತುವೆ ಮೂಲಕ ಸಂಚಾರ ನಿಷೇಧಿಸಿರುವುದು ಅವರ ಸಂಚಾರ ಸಂಕಷ್ಟವನ್ನು ಇಮ್ಮಡಿಗೊಳಿಸಿದೆ. ದುರಂತ ಭೀತಿ ಹಿನ್ನೆಲೆಯಲ್ಲಿ ಸಂಚಾರ ನಿಷೇಧಿಸಲಾ ಗಿದ್ದರೂ ಅಪಾಯಕಾರಿಯಾದ ರೀತಿಯಲ್ಲಿ ದ್ವಿಚಕ್ರ ವಾಹನಗಳು ಈ ಸೇತುವೆ ಮೂಲಕ ಸಂಚರಿಸುತ್ತಿದೆ. ಈ ಪ್ರದೇಶದ ಜನರಿಗೆ ಕುರುಡಪದವು, ಬಾಯಿಕಟ್ಟೆ ಮೊದಲಾದ ದೂರದ ಪ್ರದೇಶಗಳ ಮೂಲಕ ಸಂಚರಿಸಿ ತಮ್ಮ ಮನೆಗಳಿಗೆ ತಲುಪಬೇಕಾಗುತ್ತಿದ್ದು, ಆರ್ಥಿಕ ಹಾಗೂ ಸಮಯ ನಷ್ಟಕ್ಕೆ ಕಾರಣವಾಗುತ್ತಿದೆ.
ಸುಮಾರು ೩೩ ವರ್ಷಗಳ ಹಿಂದೆ ನಿರ್ಮಿಸಿದ ಈ ಸೇತುವೆ ಜೀರ್ಣಗೊಂಡ ಶೋಚನೀಯ ಸ್ಥಿತಿಯಲ್ಲಿದ್ದು, ಪೈವಳಿಕೆಯಲ್ಲಿ ನಡೆದ ನವಕೇರಳ ಯಾತ್ರೆ ಸಂದರ್ಭದಲ್ಲಿ ವಾರ್ಡ್ ಪ್ರತಿನಿಧಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಆ ಮನವಿ ಆಧಾರದಲ್ಲಿ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಸೇತುವೆಯನ್ನು ಪರಿಶೀಲಿಸಿ ತೆರಳಿದ್ದಲ್ಲದೆ ಮುಂದಿನ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ವೆಂದು ಸ್ಥಳೀಯರು ದೂರುತ್ತಾರೆ. ಸೇತುವೆ ದುರಸ್ತಿ ಶೀಘ್ರ ನಡೆಸದಿದ್ದರೆ ಸ್ಥಳೀಯರ ಸಂಚಾರ ಸಮಸ್ಯೆ ತೀವ್ರಗೊಳ್ಳಲಿದ್ದು, ಪ್ರತಿಭಟನೆಗೆ ಮುಂದಾಗಬೇಕಾದಿತೆಂದು ಎಚ್ಚರಿಸಿದ್ದಾರೆ.