ಕೆಎಸ್‌ಟಿಪಿ ರಸ್ತೆ ನಿರ್ಮಾಣ: ಚರಂಡಿ ನಿರ್ಮಾಣಕ್ಕಾಗಿ ಅಗೆದು ಹಾಕಿದ ಇಂಟರ್‌ಲಾಕ್ ಮರು ಸ್ಥಾಪಿಸಿಲ್ಲ; ಅಪಾಯಭೀತಿ

ಕುಂಬಳೆ: ಕುಂಬಳೆ- ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆ ನಿರ್ಮಾಣ ವೇಳೆ ಚರಂಡಿ ನಿರ್ಮಿಸಲು ಅಗೆದು ಹಾಕಿದ ರಸ್ತೆಯ ಇಂಟರ್‌ಲಾಕ್ ಮರು ಸ್ಥಾಪಿಸದೇ ಇರುವುದು ಇದೀಗ ಅಪಾಯಕಾರಿಯಾಗಿ ಪರಿಣಮಿಸಿದೆ.

ಕುಂಬಳೆ ಹೋಲಿಫ್ಯಾಮಿಲಿ ಶಾಲೆ ಬಳಿಯ ಕೆಎಸ್‌ಟಿಪಿ ರಸ್ತೆಯಿಂದ ಕಂಚಿಕಟ್ಟೆ ಮಳಿ ಭಾಗಕ್ಕೆ ತೆರಳುವ ರಸ್ತೆಯಲ್ಲಿ ಅಪಾಯಭೀತಿ ಉಂಟಾಗಿದೆ. ಕೆಎಸ್‌ಟಿಪಿ ರಸ್ತೆ ಕಾಮಗಾರಿ ವೇಳೆ ಚರಂಡಿ ನಿರ್ಮಿಸಲೆಂದು ಕಂಚಿಕಟ್ಟೆ ರಸ್ತೆಯ ಇಂಟರ್‌ಲಾಕ್ ಅಗೆದು ತೆಗೆಯಲಾಗಿತ್ತು. ಚರಂಡಿ ಕಾಮಗಾರಿ ಮುಗಿದ ಕೂಡಲೇ ಇಂಟರ್‌ಲಾಕ್ ಅಳವಡಿಸುವಂತೆ ಕುಂಬಳೆ ಪಂಚಾಯತ್ ಅಧಿಕಾರಿಗಳು ಕೆಎಸ್‌ಟಿಪಿ ಅಧಿಕಾರಿಗಳಲ್ಲಿ ತಿಳಿಸಿದ್ದರು. ಆದರೆ ಚರಂಡಿ ಕೆಲಸ ಮುಗಿದು ವರ್ಷ ಕಳೆದರೂ ಇಂಟರ್‌ಲಾಕ್ ಅಳವಡಿಸಿಲ್ಲ. ಇದರಿಂದ ಇಲ್ಲಿ ರಸ್ತೆ ಹಾನಿಗೀಡಾಗುತ್ತಿದೆ. ಮಾತ್ರವಲ್ಲದೆ ವಾಹನ ಅಪಘಾತಗಳಿಗೂ ಕಾರಣವಾಗಿದೆ. ಈಗಾಗಲೇ ಹಲವು ದ್ವಿಚಕ್ರ ವಾಹನಗಳು ಇಲ್ಲಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿವೆ. ಈ ಭಾಗದಿಂದ ಕುಂಬಳೆ ಶಾಲೆಗೆ ಹಲವು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ತೆರಳುತ್ತಿದ್ದಾರೆ. ರಸ್ತೆಯ ಇಂಟರ್‌ಲಾಕ್ ಚೆಲ್ಲಾಪಿಲ್ಲಿಯಾಗಿರುವುದರಿಂದ ನಡೆದಾಡಲು ಕೂಡಾ ಸಾಧ್ಯವಾಗದಂತಾಗಿದೆ. ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

You cannot copy contents of this page