ಕೇಂದ್ರೀಯ ವಿ.ವಿ. ಸಂಶೋಧನಾ ವಿದ್ಯಾರ್ಥಿನಿ ಹಾಸ್ಟೆಲ್ನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಪೆರಿಯಾದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಹಾಸ್ಟೆಲ್ನ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೇಂದ್ರೀಯ ವಿವಿಯ ಹಿಂದಿ ಭಾಷಾ ತಾರತಮ್ಯ ಸಾಹಿತ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಒಡಿಸಾ ಬಾರ್ಗರ್ ಜಿಲ್ಲೆಯ ರಪಿದ ಸಲೆಪಲಿ ನಿವಾಸಿ ರುಬಿ ಪಟೇಲ್ (27) ಸಾವನ್ನಪ್ಪಿದ ಯುವತಿ. ವಿಷಯ ತಿಳಿದ ಬೇಕಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ ಬಳಿಕ ಮೃತದೇಹ ವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ಸಾವಿನ ವಿಷಯ ತಿಳಿದ ಮೃತರ ಮನೆಯವರು ಕಾಸರಗೋಡಿಗೆ ಆಗಮಿಸಿದ್ದಾರೆ.
ರುಬಿ ಪಟೇಲ್ ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ಅದಕ್ಕೆ ಕಾರಣ ವಾದ ಹಿನ್ನೆಲೆಯನ್ನು ಪ್ರತಿಭಟಿಸಿ ಎಬಿವಿಪಿ ಮತ್ತು ಎಸ್ಎಫ್ಐ ಕಾರ್ಯಕರ್ತರಾದ ಪ್ರಸ್ತುತ ವಿವಿಯ ವಿದ್ಯಾರ್ಥಿಗಳು ನಿನ್ನೆ ಕೇಂದ್ರೀಯ ವಿಶ್ವವಿದ್ಯಾಲಯದ ಉಸ್ತುವಾರಿ ಉಪಕುಲಪತಿ ಪ್ರೊ ಕೆ.ವಿ. ಬೈಜುರವರ ಕಚೇರಿಗೆ ಪ್ರತ್ಯೇಕ ವಾಗಿ ಮೆರವಣಿಗೆ ಮೂಲಕ ಸಾಗಿ ಅದರ ಮುಂದೆ ಘೆರಾವೋ ನಡೆಸಿದರು.
ಎಸ್ಎಫ್ಐಯವರು ಉಪಕುಲ ಪತಿಯವರ ಕಚೇರಿಯನ್ನು ಹೊರಗಿನಿಂದ ಮುಚ್ಚಿ ಎರಡು ತಾಸುಗಳ ತನಕ ಪ್ರತಿಭಟನೆ ನಡೆಸಿದರು. ಆ ವೇಳೆ ಉಪಕುಲಪತಿ ಯವರು ಪ್ರಸ್ತುತ ಕಚೇರಿಯೊಳಗಿದ್ದರು.
ಎಬಿವಿಪಿ ನಡೆಸಿದ ಪ್ರತಿಭಟನೆಗೆ ಯೂನಿಟ್ ಅಧ್ಯಕ್ಷೆ ಶ್ರೀಲಕ್ಷ್ಮಿ, ಕಾರ್ಯದರ್ಶಿ ಸುರೇಂದ್ರನ್ ನೇತೃತ್ವ ನೀಡಿದರು. ಎಸ್ಎಫ್ಐಯ ಪ್ರತಿಭಟನೆಗೆ ಯೂನಿಟ್ ಕಾರ್ಯದರ್ಶಿ ಅಮಲ್ ಅಜಾದ್, ಅಭಿಜಿತ್ ಮೊದಲಾದವರು ನೇತೃತ್ವ ನೀಡಿದರು.ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣವಾದ ಹಿನ್ನೆಲೆ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಮಾತ್ರವಲ್ಲದೆ ವಿ.ವಿಯಲ್ಲಿ ಸೈಕೋಲಜಿಸ್ಟ್ ಸೇವೆಯನ್ನು ಲಭಿಸುವಂತೆ ಮಾಡಲಾಗುವುದೆಂದು ಉಪಕುಲಪತಿಯವರು ಲಿಖಿತ ಭರವಸೆ ನೀಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಬಳಿಕ ಕೊನೆಗೊಳಿಸಿದರು. ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿ ಉತ್ತರ ಪ್ರದೇಶ ಗಾಸಿಪುರದ ನಿತೇಶ್ ಯಾದವ್ (೨೮) ಎಂಬಾತ ಕಳೆದ ಫೆಬ್ರವರಿ ೨೫ರಂದು ಇದೇ ವಿ.ವಿ. ಹಾಸ್ಟೆಲ್ನೊಳಗೆ ನೇಣು ಬಿಗಿದು ಆತ್ಮಹತ್ಯೆ ಗೈದಿದ್ದನು. ಅದಾದ ಬೆನ್ನಲ್ಲೇ ಇದೇ ವಿವಿಯ ವಿದ್ಯಾರ್ಥಿನಿ ರುಬಿ ಪಟೇಲ್ ಆತ್ಮಹತ್ಯೆ ಗೈದಿದ್ದು, ಅದು ಇಡೀ ವಿವಿ ವಿದ್ಯಾರ್ಥಿ ಸಮೂಹವನ್ನೇ ಆತಂಕಕ್ಕೀಡುಮಾಡಿದೆ.