ಕೇರಳಕ್ಕೆ ಇಂದು ಮುಂಗಾರು ಮಳೆ ಪ್ರವೇಶ
ಕಾಸರಗೋಡು: ಕೇರಳಕ್ಕೆ ಇಂದು ಮುಂಗಾರು ಮಳೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಮಳೆ ನಾಳೆ ಕೇರಳ ಪ್ರವೇಶಿಸಲಿದೆ ಎಂದು ಇಲಾಖೆ ಈ ಹಿಂದೆ ಪ್ರವಚಿಸಿತ್ತು. ಈಗ ಅದರ ಮೊದಲೇ ಮಳೆಗಾಲ ಆರಂಭಗೊಳ್ಳಲಿದೆ ಎಂಬುವುದು ಇದೀಗ ಬಹುತೇಕ ಖಚಿತಗೊಂಡಂ ತಾಗಿದೆ. ಕಳೆದ ವರ್ಷ ಜೂನ್ ೫ರಂದು ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸಿತ್ತು. ಆದರೆ ವಾಡಿಕೆ ಪ್ರಕಾರದ ಮಳೆ ಲಭಿಸಿರಲಿಲ್ಲ. ಕೆಲವು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಶೇ. 60ರಷ್ಟು ಕುಸಿತ ಉಂಟಾಗಿತ್ತು.
ಕಾಸರಗೋಡು ಜಿಲ್ಲೆಯಲ್ಲಿ ಮಳೆ ಪ್ರಮಣದಲ್ಲಿ ಶೇ. 30ರಷ್ಟು ಕುಸಿತ ಉಂಟಾಗಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿಯಲಿದೆ. ಜೂನ್ 2ರ ತನಕ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಇದರ ಜತೆಗೆ ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ. ಆದ್ದರಿಂದ ಮೀನುಗಾರಿಕೆಗೆ ಬೆಸ್ತರು ಸಮುದ್ರಕ್ಕಿಳಿಯಬಾರದೆಂದು ಇಲಾಖೆ ತಿಳಿಸಿದೆ. ಇದೇ ಸಂದರ್ಭದಲ್ಲಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳನ್ನು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ ಈ ಬಾರಿ ಬೇಸಿಗೆ ಮಳೆ ಲಭಿಸಿದೆ. ಇದರಂತೆ ಕಾಸರಗೋಡು ಜಿಲ್ಲೆಯಲ್ಲಿ ಸಾಧಾರಣವಾಗಿ ಲಭಿಸುವ ಬೇಸಿಗೆ ಮಳೆಗಿಂತ ಈ ಸಲ ಶೇ. ೩೦ರಷ್ಟು ಅಧಿಕ ಮಳೆ ಲಭಿಸಿದೆ. ರಾಜ್ಯದಲ್ಲಿ ಅತೀ ಹೆಚ್ಚು ಎಂಬಂತೆ ಕೋಟಯಂ ಜಿಲ್ಲೆಯಲ್ಲಿ ಶೇ. ೮೭ ಹೆಚ್ಚು ಮಳೆ ಲಭಿಸಿದೆ.