ಕೇರಳಕ್ಕೆ ಮೋದಿಯ ಇಮ್ಮಡಿ ಕೊಡುಗೆ: ಸುರೇಶ್‌ಗೋಪಿ, ಜೋರ್ಜ್ ಕುರ್ಯನ್‌ಗೆ ಕೇಂದ್ರ ಸಚಿವ ಸ್ಥಾನ
ನವದೆಹಲಿ: ಸತತ ಮೂರನೇ ಅವಧಿಗೆ ಭಾರತದ ಪ್ರಧಾನಮಂತ್ರಿಯಾಗಿ ನಿನ್ನೆ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಸಮಗಟ್ಟಿದ್ದಾರೆ. ಆದರೂ ಅವರ ಈ ದಾಖಲೆಯಲ್ಲಿ ಪಕ್ಷದ ಬಹುಮತ ದಾಖಲೆ ತಪ್ಪಿಹೋಗಿದೆ.
ನೂತನ ಸಚಿವ ಸಂಪುಟದಲ್ಲಿ ಕೇರಳಕ್ಕೆ ಮೋದಿ ಇಮ್ಮಡಿ ಕೊಡುಗೆ ನೀಡಿದ್ದಾರೆ. ತೃಶೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಹುಮತದಿಂದ ಗೆದ್ದು ಲೋಕಸಭೆಗೆ ಆಯ್ಕೆಗೊಂಡ ಕೇರಳದ ಏಕೈಕ ಸಂಸದರೂ ಆಗಿರುವ ನಟ ಸುರೇಶ್‌ಗೋಪಿ ಮತ್ತು ಬಿಜೆಪಿಯ ಕೇರಳದ ಹಿರಿಯ ನೇತಾರರೂ ಆಗಿರುವ ಜೋರ್ಜ್ ಕುರ್ಯನ್‌ರಿಗೂ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನಿ ಮೋದಿ ಸ್ಥಾನ ನೀಡುವ ಮೂಲಕ ಕೇರಳಕ್ಕೂ ಅರ್ಹ ಪ್ರಾತಿನಿಧ್ಯ ನೀಡಿದ್ದಾರೆ. ಸುರೇಶ್ ಗೋಪಿಯವರಿಗೆ ಕೇಂದ್ರ ಸಚಿವ ಸ್ಥಾನ ಲಭಿಸುವುದು ನಿರೀಕ್ಷಿತವಾಗಿದ್ದರೂ ಜೋರ್ಜ್ ಕುರ್ಯನ್‌ರಿಗೆ ಅನಿರೀಕ್ಷಿತ ವಾಗಿ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಲಭಿಸಿರುವುದು ಮೋದಿ ಕೇರಳಕ್ಕೆ ನೀಡಿರುವ ಇಮ್ಮಡಿ ಕೊಡುಗೆಯಾಗಿದೆ.
ಕೋಟ್ಟಯಂ ಜಿಲ್ಲೆಯವರಾಗಿರುವ ಜೋರ್ಜ್ ಕುರ್ಯನ್ ಎಬಿವಿಪಿಯ ಮೂಲಕ ಸಾರ್ವಜನಿಕ ರಂಗಕ್ಕೆ ಪ್ರವೇಶಿಸಿ ನಂತರ ಬಿಜೆಪಿಗೆ ಸೇರ್ಪಡೆಗೊಂಡ ಬಿಜೆಪಿಯ ಕೇರಳದ ಓರ್ವ ಅಗ್ರಗಣ್ಯ ನೇತಾರರಾಗಿ ಹೊರಹೊಮ್ಮಿದ್ದಾರೆ. ಅವರಿಗೆ ಈಗ ಅರ್ಹ ಸ್ಥಾನವನ್ನೇ ಪ್ರಧಾನಿ ಮೋದಿ ನೀಡಿದ್ದಾರೆ. ಯುವೋರ್ಛಾ ರಾಷ್ಟ್ರೀಯ ಉಪಾಧ್ಯಕ್ಷ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯ ಕ್ಷರಾಗಿ ಹಾಗೂ ಬಿಜೆಪಿಯ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಯೂ ಜೋರ್ಜ್ ಕುರ್ಯನ್ ಸೇವೆ ಸಲ್ಲಿಸಿದ್ದಾರೆ. ಇವರು ಓರ್ವ ಖ್ಯಾತ ನ್ಯಾಯವಾದಿಯೂ ಆಗಿದ್ದಾರೆ. ಮೂರನೇ ಅವಧಿಗೆ ಪ್ರಧಾನಿ ಪಟ್ಟಕ್ಕೇರಿದ ನರೇಂದ್ರಮೋದಿ ನೇತೃತ್ವ ಎನ್‌ಡಿಎ ಸರಕಾರದ ಸಚಿವ ಸಂಪುಟದಲ್ಲಿ ರಾಜ್‌ನಾಥ್ ಸಿಂಗ್, ಅಮಿತ್ ಶಾ, ಜೆ.ಪಿ. ನಡ್ಡಾ, ನಿರ್ಮಲಾ ಸೀತಾರಾಮನ್, ಎಸ್. ಜೈಶಂಕರ್, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ 72 ಸಚಿವರು ಸೇರ್ಪಡೆಗೊಂಡಿದ್ದಾರೆ. ನೂತನ ಸಚಿವ ಸಂಪುಟದಲ್ಲಿ 7 ಮಂದಿ ಮಹಿಳೆಯರಿಗೆ ಸ್ಥಾನ ಲಭಿಸಿದೆ. ಕಳೆದ ಬಾರಿ 10 ಮಂದಿ ಮಹಿಳೆಯರಿಗೆ ಸ್ಥಾನ ಲಭಿಸಿತ್ತು. ವಿಶೇಷವೆಂದರೆ ಯಾವುದೇ ಮುಸ್ಲಿಂ ಪ್ರತಿನಿಧಿಗಳಿಗೆ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಲಭಿಸಿಲ್ಲ. ಯಾಕೆಂದರೆ ಈ ಬಾರಿ ಲೋಕಸಭೆಗೆ ಆಯ್ಕೆಗೊಂಡ ಎನ್‌ಡಿಎ ಅಭ್ಯರ್ಥಿಗಳಲ್ಲಿ ಯಾವುದೇ ಮುಸ್ಲಿಮರು ಒಳಗೊಂಡಿಲ್ಲ.