ಕೇರಳ ಹೈಕೋರ್ಟ್ನ ನಿವೃತ್ತ ಚೀಫ್ ಜಸ್ಟೀಸ್ ಯು.ಎಲ್. ಭಟ್ ನಿಧನ
ಕಾಸರಗೋಡು: ಕೇರಳ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮೂಲತಃ ಉಳ್ಳಾಲ ನಿವಾಸಿಯಾಗಿರುವ ಜಸ್ಟೀಸ್ ಯು.ಎಲ್. ಭಟ್ (ಉಳ್ಳಾಲ ಲಕ್ಷ್ಮೀನಾರಾಯಣ ಭಟ್) (91) ನವದೆಹಲಿಯಲ್ಲಿ ನಿಧನ ಹೊಂದಿದರು.
1933ರಲ್ಲಿ ಇವರು ಜನಿಸಿದರು. ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ವೇಳೆ ಕಮ್ಯೂನಿಸ್ಟ್ ತತ್ವ ಸಿದ್ಧಾಂತಗಳತ್ತ ಆಕರ್ಷಿತರಾದರು. ನಂತರ ಮದ್ರಾಸ್ ಲಾ ಕಾಲೇಜ್ನಲ್ಲಿ ಕಾನೂನು ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡ ಬಳಿಕ ಅವರು ಮದ್ರಾಸ್ ಸ್ಟುಡೆಂಟ್ಸ್ ಆರ್ಗನೈಸೇಷನ್ (ಎಐಎಸ್ಎಫ್)ನಲ್ಲಿ ಸಕ್ರಿಯವಾಗಿ ಕಾರ್ಯವೆಸಗತೊಡಗಿ ದರು. 1954ರಲ್ಲಿ ಕಾನೂನು ಪದವಿ ಪಡೆದ ಬಳಿಕ ಮದ್ರಾಸ್ ಹೈಕೋರ್ಟ್ ನಲ್ಲಿ ಎನ್ರೋಲ್ ಮಾಡಿ ನ್ಯಾಯ ವಾದಿಯಾಗಿ ಸೇವೆ ಆರಂಭಿಸಿದರು. ಬಳಿಕ ಅವರು ಕಾಸರಗೋಡಿಗೆ ತಮ್ಮ ವಾಸ್ತವ್ಯ ಬದಲಾಯಿಸಿದರು. ಕಾಸರಗೋಡು ಬ್ಯಾಂಕ್ ರಸ್ತೆ ಬಳಿ ಕಾಸರಗೋಡು ಕರ್ನಾಟಕ ಸಮಿತಿ ಕಚೇರಿ ಒಳಗೊಂಡಿರುವ ಮನೆಯಲ್ಲಿ ಅವರು ಖಾಯಂ ಆಗಿ ವಾಸವಾಗಿ 1986ರಿಂದ ಕಾಸರಗೋಡನ್ನೇ ಕೇಂದ್ರವನ್ನಾಗಿಸಿ ನ್ಯಾಯವಾದಿ ಸೇವೆ ಮುಂದುವರಿಸಿದರು. ಇದರ ಜೊತೆಗೆ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಅವರು ಸಕ್ರಿಯರಾಗಿದ್ದರು. 1961ರಲ್ಲಿ ಕೇರಳ ಪಬ್ಲಿಕ್ ಸರ್ವೀಸ್ ಕಮಿಷನ್ ಪರೀಕ್ಷೆ ಬರೆದು ಮುನ್ಸಿಫ್ರಾಗಿ ನೇಮಕಗೊಂಡರು.