ಕೈಗಂಟಿನ ನೋವು: ಶಸ್ತ್ರಚಿಕಿತ್ಸೆ ನಡೆಸಿದಾಗ ಲಭಿಸಿದ್ದು 25 ವರ್ಷ ಹಿಂದೆ ಕಚ್ಚಿದ ನಾಯಿಯ ಹಲ್ಲು
ಚೇರ್ತಲ: ವಾಸಿಯಾಗದ ಕೈಗಂಟು ನೋವಿನ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದಾಗ ನಾಯಿಯ ಹಲ್ಲು ಶರೀರದೊಳಗಿನಿಂದ ಲಭಿಸಿದೆ. ೨೫ ವರ್ಷಗಳಿಂದ ಈ ಹಲ್ಲು ಕೈಗಂಟಿನಲ್ಲಿ ಸೇರಿಕೊಂಡಿದೆ ಎಂದು ೩೬ರ ಹರೆಯದ ಯುವಕ ತಿಳಿಸಿದ್ದಾನೆ. ತನ್ನ ೧೧ನೇ ವಯಸ್ಸಿನಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗ ನಾಯಿ ಕಚ್ಚಿರುವುದಾಗಿ ತಣ್ಣೀರ್‌ಮುಕ್ಕಂ ನಿವಾಸಿ ವೈಶಾಖ್ ತಿಳಿಸಿದ್ದಾನೆ. ಕೈಗಂಟು ನೋವು ಅಸಹನೀಯವಾದಾಗ ಇತ್ತೀಚೆಗೆ ಚೇರ್ತಲ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತಲುಪಿದ್ದನು. ಬುಧವಾರ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದಾಗ ನಾಯಿಯ ಹಲ್ಲನ್ನು ಪತ್ತೆಹಚ್ಚಲಾಗಿದೆ. ಅಂದು ನಾಯಿ ಕಚ್ಚಿದಾಗ ಗಾಯಕ್ಕೆ ಪ್ರಾಥಮಿಕ ಚಿಕಿತ್ಸೆ ಮಾತ್ರವೇ ಮಾಡಲಾಗಿತ್ತು. ಗಾಯ ಒಣಗಿದ ಕಾರಣ ಮತ್ತೆ ಆ ಬಗ್ಗೆ ಚಿಂತಿಸಲಿಲ್ಲ. ಗಂಟಿನ ಚರ್ಮದ ಮಧ್ಯೆ ಹಲ್ಲು ಸಿಲುಕಿಕೊಂಡಿದ್ದು, ಇದರಿಂದ ಗಂಟಿನಲ್ಲಿ ಸಣ್ಣ ಗಡ್ಡೆಯಂತೆ ಕಂಡು ಬರುತ್ತಿತ್ತು. ಹಲವು ವೈದ್ಯರಿಂದ ತಪಾಸಣೆ ನಡೆಸಿದರೂ ಸಮಸ್ಯೆ ಪರಿಹಾರವಾಗಿರಲಿಲ್ಲ. ಶಸ್ತ್ರಚಿಕಿತ್ಸೆ ನಡೆಸುವಾಗ ನಾಯಿ ಕಚ್ಚಿದ ಬಗ್ಗೆ ಡಾ| ಮೊಹಮ್ಮದ್ ಮುನೀರ್‌ಗೆ ತಿಳಿದಿರಲಿಲ್ಲ. ಕೈಯಲ್ಲಿದ್ದ ಗಡ್ಡೆಯನ್ನು ತೆರವುಗೊಳಿಸಲು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ಮಧ್ಯೆ ನಾಯಿಯ ಹಲ್ಲು ಪತ್ತೆಯಾಗಿದೆ. ಆವಾಗ ವೈಶಾಖ್ ನಾಯಿ ಕಚ್ಚಿದ ಬಗ್ಗೆ ತಿಳಿಸಿದ್ದನು. ಶಸ್ತ್ರಚಿಕಿತ್ಸೆಗೆ ನರ್ಸಿಂಗ್ ಆಫೀಸರ್‌ಗಳಾದ ವಿ. ಶ್ರೀಕಲಾ, ಸಾಂಧ್ರಾಸಲೀಂ, ರಿಯ ಸಹಕರಿಸಿದರು.