ಕೈಗಾರಿಕಾ ಪ್ರಾಂಗಣದ ತ್ಯಾಜ್ಯ ಸಂಸ್ಕರಣೆ ಕಾನೂನು ಉಲ್ಲಂಘನೆಗೆ ಕ್ರಮ
ಪುತ್ತಿಗೆ: ಪಂಚಾಯತ್‌ನ ಅನಂತಪುರ ಎಸ್ಟೇಟ್ ಪಾರ್ಕ್‌ನಲ್ಲಿ ಸ್ಥಳೀಯಾಡಳಿತ ಇಲಾಖೆಯ ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ವ್ಯಾಪಕ ಕಾನೂನು ಉಲ್ಲಂಘನೆಗಳನ್ನು ಪತ್ತೆಹಚ್ಚಲಾಗಿದೆ. ಹಾಸಿಗೆ ನಿರ್ಮಾಣ, ಗುಜರಿ ಸಾಮಗ್ರಿ ಸಂಗ್ರಹ ವಿತರಣೆ, ಪ್ಲಾಸ್ಟಿಕ್ ರೀಸೈಕ್ಲಿಂಗ್ ಮೊದಲಾದ ಕಂಪೆನಿಗಳಲ್ಲಿ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ಉಪೇಕ್ಷಿಸಿರುವುದು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳು ದಂಡ ಹೇರಿವೆ.
ಕೈಗಾರಿಕಾ ಸಂಸ್ಥೆಗಳಿಗೆ, ಇತರ ಕಡೆಗಳಿಗೆ ಆಹಾರ ವಿವತರಿಸುವ ಸಮೀಪದ ಹೊಟೇಲ್‌ನಲ್ಲಿ ಉಪಯೋಗಶೂನ್ಯವಾದ ಮಲಿನ ಜಲವನ್ನು ಜಲಮೂಲಕ್ಕೆ ಹರಿಯಬಿಟ್ಟಿರುವುದರ ಹಿನ್ನೆಲೆಯಲ್ಲಿ 10,000 ರೂ. ದಂಡ ಹೇರಲಾಯಿತು. ಒಂದು ವಾರದೊಳಗೆ ತ್ಯಾಜ್ಯ ಸಂಸ್ಕರಣೆಗೆ ವ್ಯವಸ್ಥೆ ಮಾಡಲು ಹೊಟೇಲ್ ಮಾಲಕನಿಗೆ ನಿರ್ದೇಶಿಸಲಾಯಿತು. ಇದೇ ವೇಳೆ ತ್ಯಾಜ್ಯ ಸಂಗ್ರಹಿಸಲು ಪೆಟ್ಟಿಗೆಗಳನ್ನು ಇರಿಸದಿರುವುದಕ್ಕೂ ಸಮೀಪದ ಅಂಗಡಿಗಳಿಗೆ ದಂಡ ಹೇರಲಾಗಿದೆ. ಪಡನ್ನ ಗ್ರಾಮ ಪಂಚಾಯತ್‌ನ ಎರಡು ಕ್ವಾರ್ಟರ್ಸ್ ಗಳಿಗೆ 5000 ರೂ.ನಂತೆ ದಂಡ ಹೇರಲಾಗಿದೆ. ತಪಾಸಣೆ ತಂಡದಲ್ಲಿ ಸ್ಕ್ವಾಡ್ ಲೀಡರ್ ಕೆ.ವಿ. ಮೊಹಮ್ಮದ್ ಮದನಿ, ಇ.ಕೆ. ಫಾಸಿಲ್, ಸಂದೇಶ್, ಹೆಲ್ತ್ ಇನ್ಸ್‌ಪೆಕ್ಟರ್ ರಜೀಶ ಭಾಗವಹಿಸಿದರು.