ಕೈ ನರ ಕತ್ತರಿಸಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವಲಸೆ ಕಾರ್ಮಿಕೆ

ಕಾಸರಗೋಡು: ದೂರು ನೀಡಲೆಂದು ಮಗುವಿನೊಂದಿಗೆ ಪೊಲೀಸ್ ಠಾಣೆಗೆ ಬಂದ ವಲಸೆ ಕಾರ್ಮಿಕೆಯೋರ್ವೆ ತನ್ನ ಕೈನರ ಕತ್ತರಿಸಿ ಅಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಹೊಸದುರ್ಗ ಇಟ್ಟುಮ್ಮಲ್ ಇಕ್ಬಾಲ್ ಶಾಲೆಯ ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರೋರ್ವರ ಪತ್ನಿ ಆತ್ಮಹತ್ಯೆಗೆ  ಯತ್ನಿಸಿದ ಯುವತಿ. ತಾನು ವಾಸಿಸುತ್ತಿರುವ ಕ್ವಾರ್ಟರ್ಸ್ ಬಳಿಯ ಯುವಕನೋರ್ವ ತನ್ನ ಮೇಲೆ ಹಲ್ಲೆ ನಡೆಸಿ ತನ್ನನ್ನು ಮಾನಸಿಕ ರೋಗಿಯೆಂದು ಜರೆದಿದ್ದಾನೆಂಬ ದೂರಿನೊಂದಿಗೆ ಈ ಯುವತಿ ಮೊನ್ನೆ ತನ್ನ ಮಗುವಿನ ಜತೆ ಹೊಸದುರ್ಗ ಪೊಲೀಸ್ ಠಾಣೆಗೆ ಬಂದಿದ್ದಳು. ಪೊಲೀಸ್ ಠಾಣೆಯ ಹೊರಗಡೆ ಹಿಂದಿ ಭಾಷೆ ತಿಳಿದಿರುವ ಪೊಲೀಸರೋರ್ವರೊಂದಿಗೆ ಆಕೆ ಮಾತನಾಡುತ್ತಿದ್ದಂತೆಯೇ ಆಕೆ ತನ್ನ ಕೈಯ್ಯಲ್ಲಿ ಬಚ್ಚಿಟ್ಟಿದ್ದ ಬ್ಲೇಡ್‌ನಿಂದ ದಿಢೀರ್ ಆಗಿ ತನ್ನ ಕೈ ನರ ಕತ್ತರಿಸಿದ್ದಾಳೆ. ಅದನ್ನು ಕಂಡ ಆ ಪೊಲೀಸ್ ತಕ್ಷಣ ತನ್ನ ಕರವಸ್ತ್ರದಿಂದ ಗಾಯಗೊಂಡ ಆಕೆಯ ಕೈ ಭಾಗವನ್ನು ಕಟ್ಟಿ ರಕ್ತ ಒಸರುವುದನ್ನು ತಡೆಗಟ್ಟಿದ್ದಾರೆ. ತಕ್ಷಣ ಅಗ್ನಿಶಾಮಕ ದಳದ ಆಂಬುಲೆನ್ಸ್‌ನ್ನು ಅಲ್ಲಿಗೆ ಕರೆಸಿ ಅದರಲ್ಲಿ ಆಕೆಯನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದರು. ಈ ಯುವತಿ ಅಲ್ಪ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವಳಾಗಿದ್ದಳೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page