ಕೊಡ್ಲಮೊಗರು: ಕುಸಿದು ಬಿದ್ದ ಗುಡ್ಡೆಯ ಮಣ್ಣನ್ನು ಸಂಪೂರ್ಣ ತೆರವುಗೊಳಿಸದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂ ಟಾಗಿದೆ. ವರ್ಕಾಡಿ ಪಂ. ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಗೆ ಸೇರಿದ ದೈಗೋಳಿಯಿಂದ ಆನೆಕಲ್ಲು ತೆರಳುವ ರಸ್ತೆ ಮಧ್ಯೆ ಕೊಡ್ಲಮೊಗರುನಲ್ಲಿ ಅಲ್ಲಲ್ಲಿ ರಸ್ತೆ ಉದ್ದಕ್ಕೂ ಗುಡ್ಡೆ ಕುಸಿದು ಮಣ್ಣು ರಾಶಿ ಬಿದ್ದಿದೆ. ಇದು ವಾಹನ ಸಂಚಾರಕ್ಕೆ ಆತಂಕ ಉಂಟುಮಾಡುತ್ತಿದೆ. ಇತ್ತೀಚೆಗೆ ಗಾಳಿಮಳೆಗೆ ಬೃಹತ್ ಮರಗಳು ಹೊಂದಿರುವ ಎತ್ತರದ ಗುಡ್ಡೆ ಕುಸಿದು ಬಿದ್ದು ವಾಹನ ಸಂಚಾರ ಮೊಟಕುಗೊಂಡಿತ್ತು. ಅಂದು ರಸ್ತೆ ಮಧ್ಯೆ ಬಿದ್ದ ಮಣ್ಣನ್ನು ಮಾತ್ರ ತೆರವುಗೊಳಿಸಲಾಗಿದೆ. ಈಗ ಬದಿಯಲ್ಲಿರುವ ಮಣ್ಣು, ಮರಗಳು ಹಾಗೇ ಉಳಿದುಕೊಂಡಿದ್ದು, ಇದು ವಾಹನ ಸಂಚಾರಕ್ಕೆ ಅಡಚಣೆ ಸೃಷ್ಟಿಸುತ್ತಿದೆ. ರಸ್ತೆ ಕೂಡಾ ಹದಗೆಟ್ಟು ಶೋಚನೀಯ ಸ್ಥಿತಿಯಲ್ಲಿರುವ ಮಧ್ಯೆ ಸಂಚಾರಕ್ಕೆ ತಡೆಯಾಗುವ ರೀತಿಯಲ್ಲಿರುವ ಮಣ್ಣು, ಮರಗಳನ್ನು ತೆರವುಗೊಳಿಸದಿರುವುದು ಇನ್ನಷ್ಟು ಸಂಕಷ್ಟಕ್ಕೆ ಕಾರಣವಾಗಿದೆ. ಶೀಘ್ರ ರಸ್ತೆ ಸಂಚಾರ ಸುಗಮಗೊಳಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
