ಕೊಯ್ಲಿಗೆ ಸಿದ್ಧವಾದ ಅಡಕೆ ನಾಶ ವ್ಯಾಪಕ

ಕುಂಬಳೆ: ಈಗ ಉದುರುತ್ತಿರುವುದು ಅಡಕೆಯಲ್ಲ. ಬದಲಿಗೆ ಅಡಕೆ ಕೃಷಿಕರ ಕಣ್ಣೀರಾಗಿದೆ. ರಾಶಿ ರಾಶಿಯಾಗಿ ತೋಟದಲ್ಲಿ ಕಂಡುಬರುವ ಉದುರಿದ ಅಡಕೆಗಳನ್ನು ಕಂಡಾಗ ಕೃಷಿಕನಿಗೆ ಕಣ್ಣೀರು ಸುರಿಸಲಷ್ಟೇ ಸಾಧ್ಯ. ಮುಂದಿನ ತಿಂಗಳು ಅಥವಾ ಡಿಸೆಂಬರ್‌ನೊಳಗೆ ಕೊಯ್ಲು ನಡೆಸಬೇಕಾದ ಅಡಕೆಗಳು ಬಿದ್ದು ಹೋಗುತ್ತಿರುವುದು ಅಡಕೆ ಕೃಷಿಕರ ನಿರೀಕ್ಷೆಯನ್ನೇ ಹುಸಿಯಾಗಿಸಿದೆ.

ಬಲಿಯುವುದಕ್ಕಿಂತ ಮೊದಲು ಈ ಹಿಂದೆ ಅಡಕೆ ಬೀಳುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಈಗ ಬಲಿತ ಮೇಲೆ ಬೀಳುತ್ತಿರುವುದು ಕಂಡು ಬಂದಿದೆ. ಕುಂಬಳೆ ಬಳಿಯ ಶಿವರಾಮ ಭಟ್‌ರ ತೋಟದಲ್ಲಿ ಉದುರಿದ ಅಡಕೆಯ ಚಿತ್ರವಾಗಿದೆ ಇದರ ಜೊತೆ ನೀಡಿರುವುದು.

ಇದೇ ರೀತಿ ವಿವಿಧ ಕಡೆಯ ಹಲವರ ತೋಟಗಳಲ್ಲಿ ಅಡಕೆ ಬಿದ್ದು ಹೋಗುತ್ತಿದೆ. ಪುತ್ತೂರು, ಪಂಜ ಮೊದಲಾದ ಕರ್ನಾಟಕ ಪ್ರದೇಶದ ತೋಟಗಳಲ್ಲೂ ಇದೇ ರೋಗವಿದೆ. ಅಡಕೆ ಮರದ ಬುಡಕ್ಕೆ ಹಾಕುವ ಗೊಬ್ಬರದಲ್ಲಿನ ಸಮಸ್ಯೆಯಿಂದ ಈ ರೀತಿ ಆಗುತ್ತಿರಬೇಕೆಂದು ಕೆಲವರು ಶಂಕಿಸುತ್ತಿದ್ದು, ಆದರೆ ಸೂಕ್ತ ಕಾರಣವೇನೆಂದು ಅಧ್ಯಯನ ನಡೆಸಬೇಕಾಗಿದೆ.

ಉದುರಿದ ಅಡಕೆಯಿಂದ ಕೆಂಪು ನೀರು ಹೊರ ಬರುತ್ತಿದ್ದು, ಇದು ಒಣಗಿಸಲು ಕೂಡಾ ಸಾಧ್ಯವಿಲ್ಲದಾಗಿದೆ. ಬಿಸಿಲಿಗೆ ಹಾಕಲೆಂದು ಬಿದ್ದ ಅಡಕೆಯನ್ನು ಸುಲಿದರೆ ಅದು ಹುಡಿ ಹುಡಿಯಾಗುತ್ತಿದೆ. ಅರೆ ಹಣ್ಣಾದ ಅಡಕೆಗಳು ಕೆಂಪಾಗಿ ಮಧ್ಯೆ ಬಿರುಕು ಬಿಟ್ಟು ಉದುರುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ ಎಂದು ಕೃಷಿಕರು ನುಡಿಯುತ್ತಾರೆ. ಕೃಷಿ ತಜ್ಞರು ಕೂಡಲೇ ಇದಕ್ಕೆ ಸೂಕ್ತ ಪರಿಹಾರವನ್ನು ನಿರ್ದೇಶಿಸದಿದ್ದರೆ ಅಡಕೆ ಕೃಷಿಕರು ಉಪವಾಸವಾಗುವ ಸ್ಥಿತಿಗೆ ತಲುಪಲಿದೆ.

Leave a Reply

Your email address will not be published. Required fields are marked *

You cannot copy content of this page