ಕೊಲೆ ಸಹಿತ ಹಲವು ಪ್ರಕರಣಗಳ ಕುಖ್ಯಾತ ಆರೋಪಿ ಎಂಡಿಎಂಎ ಸಹಿತ ಸೆರೆ
ಕುಂಬಳೆ: ಕೊಲೆ ಸಹಿತ ಹಲವು ಪ್ರಕರಣಗಳಲ್ಲಿ ಶಾಮೀಲಾದ ಕುಖ್ಯಾತ ಆರೋಪಿಯೋರ್ವ ಎಂಡಿಎಂಎ ಸಹಿತ ಸೆರೆಗೀಡಾಗಿದ್ದಾನೆ. ಕೊಡ್ಯಮ್ಮೆ ನಿವಾಸಿ ಚಾಯಿಕಟ್ಟೆ ಮುಹಮ್ಮದ್ (51) ಎಂಬಾತನನ್ನು ಕುಂಬಳೆ ಎಸ್.ಐ. ಶ್ರಿಜೇಶ್ ನೇತೃತ್ವದ ತಂಡ ನಿನ್ನೆ ರಾತ್ರಿ ಬಂಧಿಸಿದೆ. ಈತನ ಕೈಯಿಂದ 1.530 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಈತ ಸಂಚರಿಸುತ್ತಿದ್ದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಈತನ ಮೇಲೆ ಪೊಲೀಸರು ಹಲವು ಕಾಲದಿಂದ ನಿಗಾ ಇರಿಸಿದ್ದರು. ಈ ಮಧ್ಯೆ ನಿನ್ನೆ ಈತ ಮಾದಕವಸ್ತು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಇದರಿಂದ ಎಸ್‌ಐ ಶ್ರೀಜೇಶ್ ನೇತೃತ್ವದ ಪೊಲೀಸರು ನಿನ್ನೆ ರಾತ್ರಿ ೯.೩೦ರ ವೇಳೆ ಮಫ್ತಿ ವೇಷದಲ್ಲಿ ಕೊಡ್ಯಮ್ಮೆ ಜಂಕ್ಷನ್‌ನಲ್ಲಿ ಕಾದು ನಿಂತಿದ್ದರು. ಈ ವೇಳೆ ತಲುಪಿದ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ ಎಂಡಿಎಂಎ ಪತ್ತೆಯಾಗಿದೆ. ಬಂಧಿತ ಆರೋಪಿ ಕೊಲೆ, ಕೊಲೆಯತ್ನ, ಅಪಹರಣ, ಗಾಂಜಾ ಸಾಗಾಟ ಮೊದಲಾದ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ವರ್ಷಗಳ ಹಿಂದೆ ಮಲಪ್ಪುರಂ ನಿವಾಸಿಯಾದ ಸಾಜಿತ್ ರಹಿಮಾನ್ ಎಂಬವರನ್ನು ಮುಂಬಯಿಯಿಂದ ಕೊಡ್ಯಮ್ಮೆಗೆ ಕರೆತಂದು ಇರಿದು ಕೊಲೆಗೈದ ಬಳಿಕ ಮೃತದೇಹವನ್ನು ಕಿಚ್ಚಿಟ್ಟು ಸುಟ್ಟು ಹಾಕಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.